ಬದುಕಿನ ಕೊನೆ ಅವಧಿಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು: ದೇವೇಗೌಡ
ಹುಣಸೂರು, ಜೂನ್ 29: ನನಗೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂಬ ಕನಸು ಹೊರತು ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂಬ ವ್ಯಾಮೋಹ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾಡಿನ ರೈತರ ಹಿತಕಾಯುವ ಪಕ್ಷ ಅಂತ ಏನಾದರೂ ಇದ್ದರೆ ಅದು ಜೆಡಿಎಸ್ ಮಾತ್ರ. ಆದ್ದರಿಂದ ಹಳೇ ಮೈಸೂರು ಪ್ರಾಂತ್ಯದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ನನ್ನ ಬದುಕಿನ ಕೊನೆಯ ಅವಧಿಯಲ್ಲಿ ಅನ್ನದಾತರಾದ ರೈತರ ಪಕ್ಷವಾಗಿರುವ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಇದು ನನ್ನ ಬಹುದಿನದ ಕನಸು. ಅದನ್ನು ನನಸು ಮಾಡುವಲ್ಲಿ ಕಾರ್ಯಕರ್ತರು ಮುಂದಾಗಬೇಕು ಎಂದರು.
20 ತಿಂಗಳು ಉತ್ತಮ ಅಧಿಕಾರ ನೀಡಿದ ಎಚ್.ಡಿ.ಕುಮಾರ ಸ್ವಾಮಿ ಮತ್ತೊಮ್ಮೆ ಈ ರಾಜ್ಯದ ಚುಕ್ಕಾಣಿ ಹಿಡಿಯಬೇಕು. ಆಗ ಮಾತ್ರ ಈ ನಾಡು ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಾಧ್ಯ. ಅದಕ್ಕಾಗಿ ಇಡೀ ರಾಜ್ಯವನ್ನು ಈ ಇಳಿವಯಸ್ಸಿನಲ್ಲೂ ಸುತ್ತಾಡಿ, ನಾಡಿನಗಲಕ್ಕೂ ಕಾರ್ಯಕರ್ತರು ಹಾಗೂ ಎಲ್ಲ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿಲಿದ್ದೇನೆ ಎಂದು ಹೇಳಿದರು.
ನನಗೆ ಹೋರಾಟ ಹೊಸತೇನಲ್ಲ ದಿ.ದೇವರಾಜ ಅರಸರ ಕಾಲದಲ್ಲೂ ರಾಜಿಯಿಲ್ಲದೆ ಹೋರಾಟ ಮಾಡಿದ್ದೇನೆ. ಮುಂದೆಯೂ ಹೋರಾಟ ಮಾಡುವುದಾಗಿ ಹೇಳಿದರು.
ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಷ್ಟೆ ಶಕ್ತಿಯಲ್ಲ. ಅಂದು ನಮ್ಮ ಪಕ್ಷ ಅವರನ್ನು ಬೆಳೆಸಿದ್ದಕ್ಕೆ ಇಂದು ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರ ರಾಜಕೀಯ ಜೀವನವನ್ನು ಕಾಲ ನಿರ್ಧಾರ ಮಾಡುತ್ತದೆ ಎಂದರು.












Click it and Unblock the Notifications