ಅತ್ತ ಕಾಂಗ್ರೆಸ್ಸಿನತ್ತ ಜಿ.ಟಿ.ದೇವೇಗೌಡ: ಇತ್ತ, ಮೈಸೂರು ರಾಜಕೀಯದಲ್ಲಿ ಹೊಸ ತಿರುವು
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಬರೋಬ್ಬರಿ 36ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿ.ಟಿ.ದೇವೇಗೌಡ ಸೋಲಿಸಿದ ನಂತರ, ಮೈಸೂರು ರಾಜಕೀಯದಲ್ಲಿ ಒಂದಲ್ಲಾ ಒಂದು ಬೆಳವಣಿಗೆ ನಡೆಯುತ್ತಲೇ ಇದೆ.
ಬದಲಾದ ಪರಿಸ್ಥಿತಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಜಿ.ಟಿ.ದೇವೇಗೌಡ ಸಚಿವರೂ ಆದರು. ನನಗೆ ಅರ್ಥವಾಗದ ಖಾತೆಯನ್ನು (ಉನ್ನತ ಶಿಕ್ಷಣ) ನೀಡಲಾಗಿದೆ ಎಂದು ಜಿಟಿಡಿ ಬೇಸರಿಸಿಕೊಂಡಿದ್ದರು. ಆದರೆ, ಇವರ ಬೇಸರಕ್ಕೆ ದಳಪತಿಗಳು ಸೊಪ್ಪು ಹಾಕಿರಲಿಲ್ಲ.
ಇದಾದ ನಂತರ ಜಿಟಿಡಿ ಮತ್ತು ಎಚ್ಡಿಕೆ ನಡುವಿನ ಸಂಬಂಧವೂ ಹಳಸುತ್ತಲೇ ಬಂದವು. ಅತ್ತ, ಸಿದ್ದರಾಮಯ್ಯನವರು ಜಿಟಿಡಿಗೆ ಆಪ್ತರಾಗುತ್ತಾ ಸಾಗಿದರು. ಇವರಿಬ್ಬರ ನಡುವೆ ಒಳ ಒಪ್ಪಂದ ನಡೆದಿದೆ ಎನ್ನುವ ಗುಸುಗುಸು ಸುದ್ದಿಯ ನಡುವೆ, ಜಿಟಿಡಿಯವರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಬಹುತೇಕ ಖಚಿತವಾಗುತ್ತಾ ಸಾಗುತ್ತಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು 'ಜಿಟಿಡಿ ನಮ್ಮನ್ನು ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದು ಹೌದು' ಎಂದು ಅಧಿಕೃತವಾಗಿಯೇ ಟ್ವೀಟ್ ಅನ್ನು ಮಾಡಿದ್ದಾರೆ. ಜಿಟಿಡಿ, ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ, ಮೈಸೂರು ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿವೆ.

ಇತ್ತೀಚೆಗೆ ನಡೆದ ಮೈಸೂರು ಹಾಲು ಒಕ್ಕೂಟದ ಚುನಾವಣೆ- ಜಿ.ಟಿ.ದೇವೇಗೌಡ ಶಕ್ತಿಪ್ರದರ್ಶನ
"ಹಾಲೀ ವಿಧಾನಸಭೆಯ ಅವಧಿ ಮುಗಿಯುವ ತನಕ ನಾನು ಜೆಡಿಎಸ್ ಸದಸ್ಯನಾಗಿಯೇ ಇರುತ್ತೇನೆ. ಕಾಂಗ್ರೆಸ್ ನನಗೆ ಮತ್ತು ನನ್ನ ಪುತ್ರ ಹರೀಶ್ ಗೌಡಗೆ ಟಿಕೆಟ್ ನೀಡುವುದು ಖಚಿತವಾದರೆ, ನಾನು ಆ ಪಕ್ಷವನ್ನು ಸೇರುತ್ತೇನೆ"ಎನ್ನುವ ಮಾತನ್ನು ಜಿ.ಟಿ.ದೇವೇಗೌಡ ಅವರು ಹೇಳಿದ್ದಾರೆ. ಮೈಸೂರು ಭಾಗದಲ್ಲಿ ತಾನೆಷ್ಟು ಪ್ರಭಾವಿ ಎನ್ನುವುದನ್ನು ಜಿಟಿಡಿಯವರು, ಇತ್ತೀಚೆಗೆ ನಡೆದ ಮೈಸೂರು ಹಾಲು ಒಕ್ಕೂಟದ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಆದರೂ, ಕುಮಾರಸ್ವಾಮಿಯವರು, ಜಿಟಿಡಿಯವರು ಕಾಂಗ್ರೆಸ್ ಸೇರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ.

ಜಿಟಿಡಿ ಚಾಮುಂಡೇಶ್ವರಿ ಕ್ಷೇತ್ರ, ಮತ್ತವರ ಪುತ್ರ ಹರೀಶ್ ಗೌಡಗೆ ಹುಣಸೂರು
ಮೂಲಗಳ ಪ್ರಕಾರ, ಜಿಟಿಡಿಯವರು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತವರ ಪುತ್ರ ಹರೀಶ್ ಗೌಡಗೆ ಹುಣಸೂರು ಕ್ಷೇತ್ರದ ಟಿಕೆಟ್ ಅನ್ನು ಕಾಂಗ್ರೆಸ್ಸಿನಿಂದ ಬಯಸುತ್ತಿದ್ದಾರೆ. ಈ ವಿಚಾರ ಬಹುತೇಕ ಅಂತಿಮವಾಗಿದ್ದರೂ, ಹೈಕಮಾಂಡ್ ಒಪ್ಪಿಗೆಗೆ ಕಾಯಲಾಗುತ್ತಿದೆ. ಈ ವಿಚಾರ, ಹುಣಸೂರಿನ ಹಾಲೀ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಅವರ ನಿದ್ದೆಗೆಡಿಸಿದೆ. ಎಚ್.ವಿಶ್ವನಾಥ್ ಅವರು ಬಿಜೆಪಿಗೆ ಸೇರಿದ ನಂತರ, ನಡೆದ ಉಪಚುನಾವಣೆಯಲ್ಲಿ ಎಚ್.ಪಿ.ಮಂಜುನಾಥ್ ಭರ್ಜರಿಯಾಗಿ ಜಯಭೇರಿ ಬಾರಿಸಿದ್ದರು. (ಚಿತ್ರದಲ್ಲಿ: ಜಿಟಿಡಿ ಪುತ್ರ ಹರೀಶ್ ಗೌಡ)

ಎಚ್.ಪಿ.ಮಂಜುನಾಥ್ ಅವರ ಮುಂದಿನ ಹೆಜ್ಜೆ ಕುತೂಹಲಕ್ಕೆ ಕಾರಣವಾಗಿದೆ
ತಮ್ಮ ಪುತ್ರನಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಬಯಸುತ್ತಿರುವುದರಿಂದ, ಎಚ್.ಪಿ.ಮಂಜುನಾಥ್ ಅವರ ಮುಂದಿನ ಹೆಜ್ಜೆ ಕುತೂಹಲಕ್ಕೆ ಕಾರಣವಾಗಿದೆ. ಕಾರಣ, ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಭಾವೀ ಆಗಿರುವುದು. ಹಾಗಾಗಿ, ಮಂಜುನಾಥ್ ಅವರು ದಳಪತಿಗಳನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಇನ್ನೂ ಸ್ಪಷ್ಟನೆ ಇಲ್ಲದಿದ್ದರೂ, ಒಂದು ಸುತ್ತಿನ ಮಾತುಕತೆ ಜೆಡಿಎಸ್ ಮುಖಂಡರ ಜೊತೆ ಟಿಕೆಟ್ ವಿಚಾರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. (ಚಿತ್ರದಲ್ಲಿ: ಶಾಸಕ ಎಚ್.ಪಿ.ಮಂಜುನಾಥ್)

ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಗೆ ಅಷ್ಟೇನೂ ನೆಲೆಯಿಲ್ಲ ಎನ್ನುವುದು ಗೊತ್ತಿರುವ ವಿಚಾರ
ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಗೆ ಅಷ್ಟೇನೂ ನೆಲೆಯಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಒಂದು ವೇಳೆ, ಜಿಟಿಡಿ ಎಂಡ್ ಸನ್ ಕಾಂಗ್ರೆಸ್ಸಿಗೆ ಬಂದು ಅವರು ಬಯಸಿದ ಕ್ಷೇತ್ರದ ಟಿಕೆಟ್ ಅನ್ನು ನೀಡಿದರೆ, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮಂಜುನಾಥ್ ಅವರು ಜೆಡಿಎಸ್ ಬಾಗಿಲು ತಟ್ಟಿದರೆ, ಆಗ, ಹುಣಸೂರು ಕದನ ಭಾರೀ ಕುತೂಹಲಕ್ಕೆ ಕಾರಣವಾಗಲಿದೆ.












Click it and Unblock the Notifications