ಸಭ್ಯತೆಯ ಎಲ್ಲೆ ಮೀರಲಾರೆ: ಹೆಚ್.ಡಿ.ದೇವೇಗೌಡ ಸ್ಪಷ್ಟನೆ
ಚೆಲುವರಾಯಸ್ವಾಮಿ ಪತ್ನಿ ಜೊತೆ ದೇವೇಗೌಡರು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಯಾರ ಜೊತೆಯೂ ಅಸಭ್ಯವಾಗಿ ನಡೆದುಕೊಳ್ಳುವುದಿಲ್ಲ.
ಮೈಸೂರು, ಮಾರ್ಚ್ 2 : ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯಸ್ವಾಮಿಯವರ ಪತ್ನಿಯ ಜೊತೆ ನಾನು ಅಸಭ್ಯವಾಗಿ ನಡೆದುಕೊಂಡಿಲ್ಲ. ಗೌರವದಿಂದ ಕಂಡು, ಆಶಿರ್ವದಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಚೆಲುವರಾಯಸ್ವಾಮಿ ಪತ್ನಿ ಜೊತೆ ದೇವೇಗೌಡರು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಕುರಿತಂತೆ ಮೈಸೂರಿನಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಯಾರ ಜೊತೆಯೂ ಅಸಭ್ಯವಾಗಿ ನಡೆದುಕೊಳ್ಳುವುದಿಲ್ಲ. 84ರ ವಯಸ್ಸಿನಲ್ಲಿರುವ ನನಗೆ ರಾಜಕೀಯವೇ ಬೇರೆ, ನಡವಳಿಕೆಯೇ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಸಕ ಗೋಪಾಲಯ್ಯ ಪಕ್ಷದವರ ವಿರುದ್ಧ ಮಾತಾಡಿದ್ದರಲ್ಲ ಎಂದು ಕೇಳಿದಾಗ ಪ್ರತಿಕ್ರಿಯೆ ನೀಡಿದ ಅವರು ಅಂದು ಒಂದು ದಿನ ಮಾತ್ರ ಆಕಸ್ಮಿಕವಾಗಿ ಗೋಪಾಲಯ್ಯ ಆ ರೀತಿ ನಡೆದುಕೊಂಡಿದ್ದಾರೆ.ಉಳಿದ ದಿನಗಳಲ್ಲಿ ಪಕ್ಷದಲ್ಲಿ ಚೆನ್ನಾಗಿ ನಡೆದುಕೊಂಡಿದ್ದಾರೆ.ಗೋಪಾಲಯ್ಯ ಪಕ್ಷದ ಶಿಸ್ತು ಸಮಿತಿ ಮುಂದೆ ಕ್ಷಮೆಯನ್ನೂ ಕೇಳಿದ್ದಾರೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರ ಕುರಿತಂತೆ ಮಾತಾಡಿದ ಅವರು ಶೀಘ್ರದಲ್ಲೆ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಅದು ಮಾರ್ಚ್‌ನಲ್ಲೇ ಆಗಬೇಕು ಎಂದೇನಿಲ್ಲ. ಆದರೂ ಶೀಘ್ರದಲ್ಲೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದರು. ಕುಮಾರಸ್ವಾಮಿ ಒಬ್ಬರೇ ಎಲ್ಲೆಡೆ ಓಡಾಡುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು .ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಕುರಿತಂತೆ ಕುಮಾರಸ್ವಾಮಿ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಜನರು ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದಾರೆ .ಅವರ ಅಭಿಪ್ರಾಯಕ್ಕೆ ನನ್ನ ಸಲಹೆ ನೀಡುತ್ತೇನೆ. ಮುಂದಿನ ನಿರ್ಧಾರವನ್ನು ಕುಮಾರಸ್ವಾಮಿ ತೆಗೆದುಕೊಳ್ಳುತ್ತಾರೆ.
ಜೆಡಿಎಸ್ ನ ಬಂಡಾಯ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ನಡೆದಿದ್ದು,ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಹೋರಾಟ ಮಾಡುತ್ತೇವೆ ಎಂದರು. ರಾಷ್ಟ್ರೀಯ ಪಕ್ಷಗಳಿಂದಲೂ ಕಪ್ಪ ಕಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದು ತುಂಬಾ ನೋವಿನ ವಿಚಾರವಾಗಿದ್ದು, ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಸಂಪತ್ತು ದುರ್ಬಳಕೆಯಾಗುತ್ತಿದೆ. ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಆಗಿದ್ದಾಗ ನನಗೆ ಈ ಪರಿಸ್ಥಿತಿ ಬಂದಿರಲಿಲ್ಲ. ನಾನು ಯಾರ ಹಂಗಿನಲ್ಲೂ ಅಧಿಕಾರ ನಡೆಸಿಲ್ಲ. ರಾಜ್ಯದ ಜನ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಅಪೇಕ್ಷಿಸಿದ್ದಾರೆ ಎಂದು ತಿಳಿಸಿದರು.












Click it and Unblock the Notifications