ಮೈಸೂರಿನ ಬೆಂಕಿಯುಗಳುವ ಭೂಮಿ ಪ್ರಕರಣ: ತದ್ವಿರುದ್ಧ ವರದಿ ನೀಡಿದ್ದೇಕೆ?
ತಾಲೂಕಿನ ಶಾದನಹಳ್ಳಿ ಸಮೀಪದ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಬಾಲಕ ಹರ್ಷಿಲ್ ಬಲಿಯಾಗಿ ತಿಂಗಳು ಸಮೀಪಿಸುತ್ತಿದೆ. ಆದರೂ, ಬೆಂಕಿಗೆ ಕಾರಣ ಏನು ಎಂಬುದು ಈವರೆಗೂ ಬಹಿರಂಗವಾಗಿಲ್ಲ.
ಮೈಸೂರು, ಮೇ 11 : ತಾಲೂಕಿನ ಶಾದನಹಳ್ಳಿ ಸಮೀಪದ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಬಾಲಕ ಹರ್ಷಿಲ್ ಬಲಿಯಾಗಿ ತಿಂಗಳು ಸಮೀಪಿಸುತ್ತಿದೆ. ಆದರೂ, ಬೆಂಕಿಗೆ ಕಾರಣ ಏನು ಎಂಬುದು ಈವರೆಗೂ ಬಹಿರಂಗವಾಗಿಲ್ಲ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೇಮಿಸಿದ ಬಿ.ಎಸ್.ಜೈಪ್ರಕಾಶ್ ನೇತೃತ್ವದ 10 ಸದಸ್ಯರ ಸಮಿತಿ ಮಧ್ಯಂತರ ವರದಿ ನೀಡಿದೆ. ಕೈಗಾರಿಕಾ ಸುರಕ್ಷತೆ ಮತ್ತು ಬಾಯ್ಲರ್ ಇಲಾಖೆ ಬೆಂಕಿಗೆ ತಮ್ಮ ಇಲಾಖೆ ಹೊಣೆಯಲ್ಲ ಎಂಬರ್ಥದ ವರದಿಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈ ತೊಳೆದುಕೊಂಡಿದೆ.[ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ : ತಜ್ಞರ ತಂಡದಿಂದ ವರದಿ ಸಲ್ಲಿಕೆ]
ಹರ್ಷಿಲ್ ಮರಣೋತ್ತರ ಪರೀಕ್ಷೆಯ ವಿವರ ಹಾಗೂ ತನಿಖೆಯ ಸಂದರ್ಭದಲ್ಲಿ ಪೊಲೀಸರು ದಾಖಲಿಸಿಕೊಂಡ ಹೇಳಿಕೆ ಆಧರಿಸಿ ಅಂತಿಮ ವರದಿ ನೀಡಲಾಗುವುದು ಎಂದು ಜೈ ಪ್ರಕಾಶ್ ನೇತೃತ್ವದ ಸಮಿತಿ ಹೇಳಿರುವುದು ಗ್ರಾಮಸ್ಥರಲ್ಲಿ ಸಂಶಯ ಮೂಡಿಸಿದೆ. ಬಾಲಕ ಬಲಿಯಾದ ಸ್ಥಳದ ಮರಳು, ಮಣ್ಣು ಮತ್ತು ಬೂದಿಯ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದ ಸಮಿತಿಗೆ ಬೆಂಕಿಯ ಕಾರಣ ಪತ್ತೆಹಚ್ಚಲು ತಿಂಗಳುಗಟ್ಟಲೆ ಕಾಲಾವಕಾಶ ಬೇಕೇ..? ಪೊಲೀಸರ ತನಿಖೆಗೂ ಸಮಿತಿಯ ವರದಿಗೂ ಏನು ಸಂಬಂಧ ಎಂದು ಶಾದನಹಳ್ಳಿ ಹಾಗೂ ಬೆಲವತ್ತ ಗ್ರಾಮಸ್ಥರ ಪ್ರಶ್ನೆ ಮಾಡಿದ್ದಾರೆ.

ತದ್ವಿರುದ್ಧ ವರದಿ
ಬೆಂಕಿಗೆ ಸಂಬಂಧಿಸಿದಂತೆ ಕೈಗಾರಿಕಾ ಸುರಕ್ಷತೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಡಿ.ಸಿ ಜಗದೀಶ್ ಮತ್ತು ಜೈಪ್ರಕಾಶ್ ನೇತೃತ್ವದ 10 ಸದಸ್ಯರ ಸಮಿತಿ ನೀಡಿದ ವರದಿಗಳು ತದ್ವಿರುದ್ಧವಾಗಿದವೆ.[ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿ: ಭೂವಿಜ್ಞಾನಿಗಳಿಗೇ ಸವಾಲು!]

ಸಮಿತಿ ಹೇಳುವುದೇನು?
ಸ್ಥಳದಲ್ಲಿ ಬಾಯ್ಲರ್ ಬೂದಿ ಹಾಗೂ ಮರಳು ಪತ್ತೆಯಾಗಿದೆ. ಈ ಬೂದಿ ರಾಸಾಯನಿಕ ತ್ಯಾಜ್ಯದಿಂದ ಸೃಷ್ಟಿಯಾಗಿದ್ದೇ ಎಂಬುದು ಇನ್ನೂ ಖಚಿತವಾಗಿಲ್ಲ. ಯಾವುದೇ ರಾಸಾಯನಿಕ ವಸ್ತುವಿನ ಘಾಟು ಇಲ್ಲ. ವರುಣಾ ನಾಲೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಬೆಳೆದಿರುವ ಪೊದೆಗಳಿಗೆ ಬಿದ್ದ ಬೆಂಕಿ ತಾಪಮಾನ ಏರಿಕೆಗೆ ಕಾರಣವಾಗಿದೆ. ಇದು ಬಾಯ್ಲರ್ ಬೂದಿಗೆ ವಿಸ್ತರಿಸಿರುವ ಸಾಧ್ಯತೆ ಇದೆ ಎಂದು ಜೈಪ್ರಕಾಶ್ ನೇತೃತ್ವದ ಸಮಿತಿ ಮಧ್ಯಂತರ ವರದಿಯಲ್ಲಿ ತಿಳಿಸಿದೆ.

ಬೆಂಕಿಗೆ ಕಾರಣವೇನು?
ರಾಸಾಯನಿಕ ತ್ಯಾಜ್ಯಗಳ ಅಸುರಿಕ್ಷಿತ ವಿಲೇವಾರಿಯೇ ಬೆಂಕಿಗೆ ಕಾರಣ. ಬಹಳ ಹಿಂದೆಯೇ ತ್ಯಾಜ್ಯ ಸುರಿದು, ಇದರ ಸುತ್ತ ಕಟ್ಟಡ ತ್ಯಾಜ್ಯಗಳನ್ನು ಹಾಕಲಾಗಿದೆ. ವರ್ಷಾನುಗಟ್ಟಲೆ ರಾಸಾಯನಿಕ ಕ್ರಿಯೆ ನಡೆದು ಬೆಂಕಿ ಉದ್ಭವವಾಗಿರುವ ಸಾಧ್ಯತೆ ಇದೆ. ರಾಸಾಯನಿಕ ತ್ಯಾಜ್ಯರುವ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿಗೂ ಹಾಗೂ ನಂತರ ದರ ಸುತ್ತ ಕಾಣಿಸಿಕೊಂಡಿರುವ ಬೆಂಕಿಗೂ ವ್ಯತ್ಯಾಸಗಳಿದೆ ಎಂದು ಬಾಯ್ಲರ್ ಇಲಾಖೆಯ ಡಿ.ಸಿ ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯರ ಆಕ್ರೋಶ
ಜಮೀನು ಮಾಲೀಕರು ಕೈಗಾರಿಕೆಗಳಿಂದ ಹಣ ಪಡೆದು ಕಸ ಸುರಿಯಲು ಅವಕಾಶ ನೀಡಿದ್ದಾರೆ. ಸುತ್ತಲಿನ ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯವನ್ನು ಇಲ್ಲಿ ಸುರಿದಿದನ್ನು ನಾವೇ ಕಂಡಿದ್ದೇವೆ. ಅಂತಹ ಕೈಗಾರಿಕೆಗಳ ಹೆಸರನ್ನು ಸಮಿತಿಗೆ ನೀಡಿದರೂ ಮಧ್ಯಂತರ ವರದಿಯಲ್ಲಿ ನಮೂದಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚುವರಿ ತಾಪಮಾನ
ಹರ್ಷಿಲ್ ಬಲಿಯಾದ ಸ್ಥಳದ ತಾಪಮಾನವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಿನವೂ ಪರಿಶೀಲಿಸುತ್ತಿದ್ದಾರೆ. ಈ ಸ್ಥಳದ ಮೂರು ಕಡೆ 72, 62, ಹಾಗೂ 54 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ಇನ್ನು ಈ ಜಮೀನಿನಲ್ಲಿ ಪೊಲೀಸರು ಸಿಬ್ಬಂದಿ ನಿಗಾ ವಹಿಸಿದ್ದಾರೆ. ನಿತ್ಯವೂ ಸ್ಥಳಕ್ಕೆ ಭೇಟಿ ನೀಡಿ ತಾಪಮಾನ ದಾಖಲಿಸುತ್ತಿದ್ದೇನೆ. ದಿನ ಕಳೆದಂತೆ ತಾಪಮಾನ ಕಡಿಮೆಯಾಗುತ್ತಿರುವುದಾಗಿ ಒನ್ ಇಂಡಿಯಾಗೆ ಪರಿಸರ ಅಧಿಕಾರಿ ರಘುರಾಮ್ ತಿಳಿಸಿದ್ದಾರೆ.












Click it and Unblock the Notifications