ಸಿದ್ದರಾಮಯ್ಯ ಆಪ್ತ ಹೆಚ್.ಸಿ ಮಹದೇವಪ್ಪಗೆ ಸಿಗುತ್ತಾ ಸಚಿವ ಸ್ಥಾನ?
ಮೈಸೂರು, ಮೇ 23: ವಿರೋಧಪಕ್ಷವಾಗಿದ್ದ ವೇಳೆ ಮೌನವಾಗಿಯೇ ಇದ್ದ ಕಾಂಗ್ರೆಸ್‌ನ ಶಾಸಕರು ಇದೀಗ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಚಿವ ಸ್ಥಾನಕ್ಕೆ ಮುಗಿಬಿದ್ದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗುವವರೆಗೆ ಕಾಯಲಾಗದೇ ಕೆಲವು ಶಾಸಕರು ಈಗಲೇ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಕಾಂಗ್ರೆಸ್ ಪಕ್ಷ ಸುಮಾರು 135 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಆದರೆ ಕೆಲವೇ ಕೆಲವರಿಗೆ ಮಾತ್ರ ಸಚಿವ ಸ್ಥಾನ ನೀಡಲು ಸಾಧ್ಯವಿದೆ. ಆದರೆ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿರುವ ಕಾರಣದಿಂದಾಗಿ ಪಕ್ಷಕ್ಕಾಗಿ ಶ್ರಮವಹಿಸಿದ ಹಿರಿಯ ಬಹುತೇಕ ಶಾಸಕರು ಸಚಿವರಾಗಿಯೇ ತೀರಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಶನಿವಾರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರದ ವೇಳೆ ಕೇವಲ ಎಂಟು ಮಂದಿ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಇನ್ನುಳಿದಂತೆ ಸಚಿವರ ಆಯ್ಕೆ ಮತ್ತು ಖಾತೆ ಹಂಚಿಕೆ ಎಲ್ಲವೂ ಇನ್ನುಮುಂದೆ ನಡೆಯಬೇಕಾಗಿದೆ. ಆದರೆ ಸಚಿವ ಸ್ಥಾನಕ್ಕಾಗಿ ಶಾಸಕರು ದೊಡ್ಡಮಟ್ಟದಲ್ಲಿ ಲಾಬಿ ಮಾಡಿಸುತ್ತಿದ್ದಾರೆ. ಅದರಲ್ಲೂ ಮೈಸೂರು ಭಾಗದಲ್ಲಿ ಪ್ರಭಾವಿ ಶಾಸಕ, ಈ ಹಿಂದೆ ಸಚಿವರಾಗಿ, ಸಿದ್ದರಾಮಯ್ಯರಿಗೆ ಆಪ್ತರಾಗಿದ್ದ ತಿ.ನರಸೀಪುರ ಶಾಸಕ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಚದುರಿ ಹೋಗಿದ್ದ ದಲಿತ ಮತಗಳು
ದಲಿತ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಾಗಿದ್ದರಿಂದ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು ಎಂಬುದು ದಲಿತ ನಾಯಕರ ಅಭಿಪ್ರಾಯವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆದ್ದುಕೊಂಡಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಸಿದ್ದರಾಮಯ್ಯರವರು ದಲಿತ ನಾಯಕ ಹಿರಿಯ ಮುತ್ಸದ್ಧಿ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಮಂತ್ರಿ ಮಂಡಲದಿಂದ ಹೊರಗೆ ಇಟ್ಟಿದ್ದಾಗಿತ್ತು. ಪಕ್ಷದಿಂದ ಹೊರ ಬಂದ ಅವರು ಬಿಜೆಪಿ ಸೇರಿದ್ದರು. ಅವತ್ತು ವಿ.ಶ್ರೀನಿವಾಸ ಪ್ರಸಾದ್ ಅವರನ್ನು ದಲಿತರು ಬೆಂಬಲಿಸಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ದಲಿತರು, ಅಹಿಂದ ವರ್ಗಗಳ ಮತಗಳ ಕ್ರೋಢಿಕರಣ ಮಾಡುವಲ್ಲಿ ಮೈಸೂರು ಮೂಲದ ಡಾ.ಎಚ್.ಸಿ.ಮಹದೇವಪ್ಪ ಅವರ ಶ್ರಮ ಇರುವುದನ್ನು ತಳ್ಳಿಹಾಕುವಂತಿಲ್ಲ. ಆದರೀಗ ಮೊದಲ ಪಟ್ಟಿಯಲ್ಲಿ ಅವರಿಗೆ ಅವಕಾಶ ದೊರೆಯದಿರುವುದು ಅವರ ಆಪ್ತರ ಅಸಮಾಧಾನಕ್ಕೆ ಕಾರಣವಾಗಿದೆ. ದಲಿತ ವರ್ಗದ ಅಥವಾ ಹಿರಿತನದ ಆಧಾರದ ಮೇಲೆ ಮೊದಲ ಪಟ್ಟಿಯಲ್ಲಿ ಸಚಿವರಾಗಬೇಕಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಕೊನೆಯ ಕ್ಷಣದಲ್ಲಿ ಕೈಬಿಡಲಾಗಿದೆ. ಕೂಡಲೇ ಅವರಿಗೆ ಸಚಿವಸ್ಥಾನ ನೀಡಬೇಕೆಂಬ ಒತ್ತಾಯಗಳು ಆರಂಭವಾಗಿದೆ.

ದಲಿತರ ಮತ ಸೆಳೆದ ಡಾ.ಹೆಚ್.ಸಿ.ಮಹದೇವಪ್ಪ
ಚದುರಿಹೋಗಿದ್ದ ದಲಿತ ಮತಗಳನ್ನು ಈ ಬಾರಿ ಕಲೆಹಾಕಲಾಗಿದೆ. ಇಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ರಾಜ್ಯದ ಎಲ್ಲಾ ದಲಿತ ಸಂಘರ್ಷ ಸಮಿತಿ ಬಣಗಳನ್ನು ಒಗ್ಗೂಡಿಸಿ ಒಕ್ಕೂಟ ರಚನೆ ಮಾಡಿಸುವ ಮೂಲಕ ಬೆಂಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಐತಿಹಾಸಿಕ ಸಮಾವೇಶ ನಡೆಯುವಂತೆ ನೋಡಿಕೊಂಡಿದ್ದನ್ನು ಮರೆಯುವಂತಿಲ್ಲ. ಅಲ್ಲದೆ ಜಿಲ್ಲಾ ಕೇಂದ್ರಗಳಲ್ಲೂ ಸಮಾವೇಶ ಆಗುವಂತೆ ಮಾಡಿ ಚದುರಿಹೋಗಿದ್ದ ಬಣಗಳು ಒಂದಾಗುವಂತೆ ಮಾಡಿದ್ದರ ಫಲವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಶೇ.90ರಷ್ಟು ಮತಗಳು ದೊರಕಲು ಸಾಧ್ಯವಾಗಿದೆ ಎಂದು ಮಹದೇವಪ್ಪ ಆಪ್ತರು ಹೇಳುತ್ತಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರಿಂದ ದಲಿತ ಮತಗಳು ದೂರವಾಗದಂತೆ ನೋಡಿಕೊಳ್ಳಲು ನರಸೀಪುರ ಕ್ಷೇತ್ರಕ್ಕಿಂತಲೂ ಹೆಚ್ಚಿನ ಗಮನವನ್ನು ಮಹದೇವಪ್ಪರವರು ವರುಣಾ ಕ್ಷೇತ್ರಕ್ಕೆ ನೀಡಿದ್ದರು. ಅಲ್ಲದೆ, ತಗಡೂರು, ವರುಣ, ಬಿಳಿಗೆರೆ, ಕಸಬಾ ಹೋಬಳಿಯಲ್ಲಿ ಪ್ರತ್ಯೇಕವಾಗಿ ದಲಿತ ಮುಖಂಡರ ಸಭೆಗಳನ್ನು ನಡೆಸಿ ಮತದಾರರನ್ನು ಸೆಳೆಯುವಂತೆ ಮಾಡಿದ್ದರು. ಜೊತೆಗೆ ರಾಜ್ಯಮಟ್ಟದ ನಾಯಕರು, ಚಿಂತಕರು, ಸಾಹಿತಿಗಳು ಸೇರಿ ಇನ್ನಿತರ ಕ್ಷೇತ್ರಗಳ ಪ್ರಮುಖರನ್ನು ಬರಮಾಡಿಕೊಂಡು ಪ್ರಚಾರ ನಡೆಸಿದ್ದರು. ಇದರಿಂದಾಗಿ ಕೆಲವರಲ್ಲಿ ಇದ್ದ ಗೊಂದಲ ನಿವಾರಣೆಯಾಗಿ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚಲಾವಣೆ ಆದವು.
ಮಹದೇವಪ್ಪರಿಗೆ ಸಚಿವ ಸ್ಥಾನ ಸಿಗುತ್ತಾ?
ಇದೆಲ್ಲವನ್ನು ಗಮನಿಸಿ ರಾಜ್ಯ ಸಚಿವ ಸಂಪುಟ ರಚನೆ ವೇಳೆ ಮೊದಲ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಬೇಕಾಗಿತ್ತು. ಇನ್ನು ಹಳೆಯ ಮೈಸೂರು ಪ್ರಾಂತ್ಯದ ದಲಿತ ನಾಯಕರಾಗಿರುವ ಡಾ.ಎಚ್.ಸಿ.ಮಹದೇವಪ್ಪ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. ವಿ.ಶ್ರೀನಿವಾಸ್ ಪ್ರಸಾದ್ ಅವರ ನಂತರದಲ್ಲಿ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಇದರಿಂದ ದಲಿತ ಅಥವಾ ಜಿಲ್ಲಾವಾರು ಪ್ರಾತಿನಿಧ್ಯ ಕೋಟಾದಡಿ ಮುಂದಿನ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ದಲಿತ ನಾಯಕರು ಒತ್ತಾಯಿಸುತ್ತಿದ್ದಾರೆ.
ಒಟ್ಟಾರೆ ಸಚಿವ ಸ್ಥಾನಕ್ಕೆ ಶಾಸಕರು ಮುಗಿಬಿದ್ದಿರುವ ಈ ಸಮಯದಲ್ಲಿ ಹಳೇ ಮೈಸೂರು ಭಾಗದ ಪ್ರಭಾವಿ ದಲಿತ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಮುಂದಿನ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಕ್ಕಿಯೇ ಸಿಗುತ್ತದೆ ಎಂಬ ಆಶಾಭಾವನೆಯಿದೆ. ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications