2 ವರ್ಷದ ಮಗುವನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಮೈಸೂರು, ನವೆಂಬರ್ 18 : ಮತ್ತೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ತನ್ನ ಎರಡು ವರ್ಷದ ಮಗುವನ್ನು ಕೊಲೆ ಮಾಡಿ, ಆ ನಂತರ ಮಗುವಿನ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕುರ್ಣೆಗಾಲದಲ್ಲಿ ನಡೆದಿದೆ.
ರಾಜೇಶ್ವರಿ (23) ಹಾಗೂ ಮಾನ್ವಿತಾ (2) ಸಾವನ್ನಪ್ಪಿದ ದುರ್ದೈವಿಗಳು. ಎಚ್.ಡಿ.ಕೋಟೆಯ ಕೂಡಗಿ ಗ್ರಾಮದ ಸೋಮಣ್ಣ ಹಾಗೂ ಪಕ್ಕದ ಕುರ್ಣೆಗಾಲ ಗ್ರಾಮದ ರಾಜೇಶ್ವರಿ 6 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಂದು ಹೆಣ್ಣು ಮಗು ಹಾಗೂ ಒಂದು ಗಂಡು ಮಗು ಇತ್ತು. ವಿನೋದ್ ಎಂಬಾತನ ಜೊತೆ ರಾಜೇಶ್ವರಿ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಆರೋಪ ಕೇಳಿಬಂದಿತ್ತು.

2 ವರ್ಷಗಳಿಂದ ಅಕ್ರಮ ಸಂಬಂಧ ಇಟ್ಟುಕೊಂಡ ಆರೋಪ ಇತ್ತು. ಸೋಮಣ್ಣ ಹಲವು ಬಾರಿ ಬುದ್ಧಿವಾದ ಹೇಳಿದರೂ ರಾಜೇಶ್ವರಿ ಕೇಳಿರಲಿಲ್ಲ. ಇದರಿಂದ ಬೇಸತ್ತ ಪತಿ ಸೋಮಣ್ಣ, ರಾಜೇಶ್ವರಿಯನ್ನು ಆಕೆಯ ತವರು ಮನೆಗೆ ಬಿಟ್ಟಿದ್ದ. ಇದರಿಂದ ಮನನೊಂದ ರಾಜೇಶ್ವರಿ ಮಗುವನ್ನು ನೇಣಿಗೆ ಹಾಕಿ, ತಾನೂ ನೇಣಿಗೆ ಶರಣಾಗಿದ್ದಾಳೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications