"ಮುಂದಿನ ವರ್ಷ ಅದ್ದೂರಿ ದಸರಾ ಆಚರಣೆಗೆ ಚಾಮುಂಡೇಶ್ವರಿ ಕರುಣಿಸಲಿ"
ಮೈಸೂರು, ಅಕ್ಟೋಬರ್ 26: ಜನರು ಎಲ್ಲ ಸಂಕಷ್ಟಗಳಿಂದ ಮುಕ್ತಗೊಂಡು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮೈಸೂರಿನ ಲಲಿತ್ ಮಹಲ್ ಹೆಲಿಪ್ಯಾಡ್ ಬಳಿ ದಸರಾ ಜಂಬೂಸವಾರಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಹಾಗೂ ಬೇರೆ ಬೇರೆ ಕಾರಣಗಳಿಂದ ಬಹಳ ಸರಳವಾಗಿ ದಸರಾ ಮತ್ತು ಜಂಬೂ ಸವಾರಿಯನ್ನು ಮಾಡುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ದಯೆಯಿಂದ ಈ ಕೊರೊನಾದಿಂದ ಬಿಡುಗಡೆಯಾಗಲಿ. ಮುಂದಿನ ವರ್ಷ ಬಹಳ ವಿಜೃಂಭಣೆಯಿಂದ ನಾವು ಆಚರಿಸುವಂತಹ ಶಕ್ತಿಯನ್ನು ಆ ತಾಯಿ ಚಾಮುಂಡೇಶ್ವರಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ನಾಡಿನ ಎಲ್ಲ ಜನರಿಗೆ ವಿಜಯದಶಮಿಯ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತೇನೆ ಎಂದರು.
ನಾಡಿನ ಜನರು ಎಲ್ಲ ಸಂಕಷ್ಟಗಳಿಂದ ಪಾರಾಗಿ, ನೆಮ್ಮದಿಯಿಂದ ಬದುಕುವ ಒಳ್ಳೆಕಾಲ ತಾಯಿ ಚಾಮುಂಡೇಶ್ವರಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಈ ಸಂದರ್ಭ ಮುಖ್ಯಮಂತ್ರಿಗಳ ಜೊತೆಗೆ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್ ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮಾಜಿ ಸಚಿವ ಹೆಚ್.ವಿಜಯ್ ಶಂಕರ್ ಇದ್ದರು.











Click it and Unblock the Notifications