ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್; ಏ.25ಕ್ಕೆ ಘಟಿಕೋತ್ಸವ
ಮೈಸೂರು, ಏಪ್ರಿಲ್ 23: ಇದೇ ಏ.25ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವವು ನಡೆಯಲಿದ್ದು, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ.ಎಸ್. ವಿದ್ಯಾಶಂಕರ್ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ.ಎಸ್. ವಿದ್ಯಾಶಂಕರ್, ಬೆಂಗಳೂರಿನ ಆರ್.ವಿ. ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಎ.ವಿ.ಎಸ್. ಮೂರ್ತಿ, ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆ ಮುಖ್ಯಸ್ಥ ಈ.ಎಸ್. ಈಶ್ವರ್ ಹಾಗೂ ವಿ.ಆರ್.ಎಲ್ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸಂಕೇಶ್ವರ್‌ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದರು.
8,338 ವಿದ್ಯಾರ್ಥಿಗಳಿಗೆ ಪದವಿ:
ಈ ಬಾರಿಯೂ ಮಹಿಳಾ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ವಿವಿಧ ವಿಷಯಗಳಲ್ಲಿ ಪದವಿ ಪಡೆದ 3,272 ಪುರುಷರು ಮತ್ತು 5,066 ಮಹಿಳಾ ಅಭ್ಯರ್ಥಿಗಳು ಸೇರಿ 8,338 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 31 ಮಂದಿಗೆ ಪಿಎಚ್‌ಡಿ ನೀಡಲಾಗುತ್ತಿದ್ದು, 48 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 38 ಅಭ್ಯರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸೋಮವಾರ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಭಾಗವಹಿಸಲಿದ್ದು, ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನದ ನಿರ್ದೇಶಕ, ಕೆಎಸ್‌ಟಿಇಪಿಎಸ್ ನಿರ್ವಾಹಕ ನಿರ್ದೇಶಕ ಎ.ಬಿ. ಬಸವರಾಜು ಘಟಿಕೋತ್ಸವ ಭಾಷಣ ಮಾಡುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಡಾ.ಆರ್. ರಾಜಣ್ಣ ಡಾ.ಕೆ.ಬಿ. ಪ್ರವೀಣ (ಮೌಲ್ಯಮಾಪನ) ಹಾಜರಿದ್ದರು.
ನನ್ನ ಕೇಳುವ ಅಧಿಕಾರ ಇಲ್ಲ: ಕುಲಪತಿ
ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಸಂಬಂಧಿಸಿದಂತೆ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರಿಗೆ ಉತ್ತರ ಕೊಡಬೇಕು ಹೊರತು ಬೇರೆ ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಹೇಳಿದರು.

ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರೆ, ಅಲ್ಲಿಂದ ಉತ್ತರ ಕೇಳಿದರೆ ಕೊಡುತ್ತೇನೆ. ಕೆಲವು ವಿಚಾರಗಳಿಗೆ ಕೇಳಿದ ಉತ್ತರಕ್ಕೆ ಈಗಾಗಲೇ ನೀಡಲಾಗಿದೆ. ಯಾವುದೇ ವಿಚಾರಕ್ಕೂ ಎದೆಗುಂದಲ್ಲ. ನನ್ನ ಕೇಳುವ ಅಧಿಕಾರ ಇಬ್ಬರಿಗೆ ಮಾತ್ರ. ಉಳಿದವರ ವಿಚಾರದಲ್ಲಿ ನಾನು ಮಾತನಾಡಲ್ಲ, ಗಮನಕೊಡಲ್ಲ. ಮುಕ್ತ ವಿವಿಯು ನಿರಂತರವಾಗಿ ನಡೆಯಲು ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.











Click it and Unblock the Notifications