ಮೈಸೂರು: ಕರಾಮು ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿ
ಮೈಸೂರು, ಜೂನ್, 30: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಜುಲೈ 2ರಂದು ನಡೆಯುವ ವಿವಿಯ 18ನೇ ಘಟಿಕೋತ್ಸವದ ಗೌರವ ಡಾಕ್ಟರೇಟ್ ಪದವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರಾಮುವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಅತಿಥಿಗೃಹ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಶಿಕ್ಷಕರು ಹಾಗೂ ಆದಿವಾಸಿ ಮಹಿಳೆ ಆಗಿರುವ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಗೌರವ ಡಿ.ಲಿಟ್(ಗೌರವ ಡಾಕ್ಟರೇಟ್)ಪದವಿ ನೀಡಲು ಆಯ್ಕೆ ಮಾಡಲಾಗಿದೆ.

ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಎನ್. ರಾಮಚಂದ್ರ, ಆರೋಗ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿ ವೆಂಕಟಲಕ್ಷ್ಮಿ ನರಸಿಂಹರಾಜು ಸೇರಿ ಒಟ್ಟು ಮೂವರು ಡಿ.ಲಿಟ್ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗೌರವ ಡಾಕ್ಟರೇಟ್‌ಗೆ ಆಯ್ಕೆ ಆಗಿರುವ ವಿಷಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಿಳಿಸಲಾಗಿದೆ. ಜುಲೈ 2ರಂದು ನಡೆಯುವ ಕರಾಮು ವಿವಿ ಘಟಿಕೋತ್ಸವಕ್ಕೆ ಅವರನ್ನು ಆಹ್ವಾನಿಸಲಾಗಿದೆ. ಆ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರು ಬಾರದಿದ್ದರೆ, ಜುಲೈ 3ರಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಆ ವೇಳೆ ಬೆಂಗಳೂರಿನ ರಾಜಭವನದಲ್ಲಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಬಾರಿ ಒಬ್ಬ ಮಹಿಳೆಗೆ ರಾಜ್ಯ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ನೀಡಲಾಗಿದೆ. ಸ್ನಾತಕೋತ್ತರದಲ್ಲಿ 7,057 ವಿದ್ಯಾರ್ಥಿಗಳು ತೇರ್ಗಡೆಯಾದರೇ, ಸ್ನಾತಕ ಪದವಿಯಲ್ಲಿ 1,664 ಉತ್ತೀರ್ಣ ಆಗಿದ್ದಾರೆ ಎಂದು ತಿಳಿಸಿದರು.
ಇನ್ನು ಘಟಿಕೋತ್ಸವದಲ್ಲಿ ಪಿಎಚ್‌ಡಿ 1, ಚಿನ್ನದ ಪದಕ 44, 27 ಮಂದಿಗೆ ನಗದು ಬಹುಮಾನ ನೀಡಲಾಗುತ್ತದೆ. ಮತ್ತು 8,722 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ 5,241 ಮಹಿಳೆಯರು ಹಾಗೂ 3,481 ಪುರುಷರು ಅರ್ಹರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications