ಕೇರಳಕ್ಕೆ ಹೋಗದಂತೆ ಮೈಸೂರಿನ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೂಚನೆ
ಮೈಸೂರು, ಮೇ 25 : ಮಹಾಮಾರಿ ನಿಪಾಹ್ ವೈರಾಣು ಹರಡುವಿಕೆಯನ್ನು ತಡೆಯಲು ಮೈಸೂರು ಆರೋಗ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಅದರಲ್ಲೂ ನಗರದಲ್ಲಿ ಅಧ್ಯಯನ ಮಾಡುತ್ತಿರುವ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳ ಮೇಲೆ ಗಮನವಿರಿಸಿದೆ.
ಕೇರಳ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಪ್ರಯಾಣ ಕೈಗೊಳ್ಳುವುದನ್ನು ನಿಯಂತ್ರಿಸುವಂತೆ ಜಿಲ್ಲಾ ವ್ಯಾಪ್ತಿಯ ನರ್ಸಿಂಗ್ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಲು ನಿರ್ಧರಿಸಿದೆ. ನಿಪಾಹ್ ವೈರಾಣು ಆ ಭಾಗದಿಂದ ಮೈಸೂರು ಜಿಲ್ಲೆಗೆ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ಇದರ ಮೊದಲ ಕ್ರಮವಾಗಿ ಮೈಸೂರು ಭಾಗದಿಂದ ಕೇರಳಕ್ಕೆ ಪ್ರಯಾಣಿಸುವವರು ಮತ್ತು ಆ ಭಾಗದಿಂದ ಇಲ್ಲಿಗೆ ಆಗಮಿಸುವವರ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿದೆ. ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳು ಸದ್ಯಕ್ಕೆ ತಮ್ಮ ಸ್ವಸ್ಥಾನಗಳಿಗೆ ಮರಳದಂತೆ ನರ್ಸಿಂಗ್ ಕಾಲೇಜುಗಳಿಗೆ ಸೂಚನೆ ನೀಡಲು ತೀರ್ಮಾನಿಸಿದೆ.

ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳಲ್ಲಿ ಸಾವಿರಕ್ಕೂ ಹೆಚ್ಚು ಕೇರಳ ಮೂಲದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಕಾಲೇಜು ವಿದ್ಯಾರ್ಥಿಗಳ ಕೇರಳ ಪ್ರಯಾಣವನ್ನು ಸದ್ಯಕ್ಕೆ ನಿಯಂತ್ರಿಸುವಂತೆ ಕಾಲೇಜು ಮುಖ್ಯಸ್ಥರಿಗೆ ಆರೋಗ್ಯ ಇಲಾಖೆ ಪತ್ರ ಬರೆದು ಮನವಿ ಮಾಡಲಿದೆ.
ಮೈಸೂರು ಭಾಗದ ಅನೇಕ ಆಸ್ಪತ್ರೆಗಳಲ್ಲಿ ಕೇರಳ ಮೂಲದವರು ನೂರಾರು ಮಂದಿ ದಾದಿಯರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಾಕಷ್ಟು ಮಂದಿ ಆಹಾರ ತಯಾರಿಕೆ ಕ್ಷೇತ್ರದಲ್ಲಿ ಬೇಕರಿ ವಸ್ತುಗಳ ತಯಾರಿಕೆಯಲ್ಲಿ, ಇನ್ನಿತರ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಇವರೆಲ್ಲರಿಗೂ ಸದ್ಯಕ್ಕೆ ಸ್ವ-ಸ್ಥಾನಗಳಿಗೆ ಪ್ರಯಾಣ ಕೈಗೊಳ್ಳದಂತೆ ಹಾಗೂ ತಮ್ಮ ಊರಿನವರನ್ನು ಸದ್ಯಕ್ಕೆ ಮೈಸೂರು ಭಾಗಕ್ಕೆ ಆಹ್ವಾನಿಸದಂತೆ ಅರಿವು ಮೂಡಿಸಲಾಗುತ್ತಿದೆ. ಅದಕ್ಕಾಗಿ ಈ ವಿಚಾರಗಳನ್ನು ಒಳಗೊಂಡ ಕರಪತ್ರಗಳನ್ನು ವಿತರಿಸಲು ಇಲಾಖೆ ಮುಂದಾಗಿದೆ.












Click it and Unblock the Notifications