ಕುಮಾರಸ್ವಾಮಿ ನಕಲಿ ಪತ್ರ ಓದಿದ್ದಾರೆ: ನಾರಾಯಣಗೌಡ
ಮೈಸೂರು, ನವೆಂಬರ್ 28: 'ದೇವರಾಣೆಗೂ ನಾನು ಕುಮಾರಸ್ವಾಮಿಗೆ ಯಾವ ಪತ್ರವನ್ನು ನಾನು ಬರೆದಿಲ್ಲ' ಎಂದು ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪ್ರಮಾಣ ಮಾಡಿದ್ದಾರೆ.
ನಿನ್ನೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಕುಮಾರಸ್ವಾಮಿ, 'ನಾರಾಯಣಗೌಡ ಜೆಡಿಎಸ್‌ನಲ್ಲಿದ್ದಾಗ ತಮಗೆ ಬರೆದಿದ್ದ ಪತ್ರ ಎಂದು ಒಂದು ಪತ್ರವನ್ನೋದಿದ್ದರು. ಅದರಲ್ಲಿ ಕುಮಾರಸ್ವಾಮಿ ಅವರನ್ನು ಸಹೋದರ ಎಂದೂ, ದೇವೇಗೌಡ, ಚೆನ್ನಮ್ಮ ಅವರನ್ನು ತಾಯಿಯೆಂದು' ಕರೆದಿದ್ದಾಗಿ ಕುಮಾರಸ್ವಾಮಿ ಹೇಳಿದ್ದರು.
ಆದರೆ ಇಂದು ಈ ಬಗ್ಗೆ ಮಾತನಾಡಿರುವ ನಾರಾಯಣಗೌಡ, 'ದೇವರಾಣೆಗೂ ನಾನೂ ಯಾವ ಪತ್ರವನ್ನೂ ಕುಮಾರಸ್ವಾಮಿ ಗೆ ಬರೆದಿಲ್ಲ, ನಕಲಿ ಪತ್ರವನ್ನು ಕುಮಾರಸ್ವಾಮಿ ಓದಿದ್ದಾರೆ' ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಕಣ್ಣೀರು ಹಾಕಿರುವ ಬಗ್ಗೆಯೂ ವ್ಯಂಗ್ಯ ಮಾಡಿರುವ ನಾರಾಯಣಗೌಡ, 'ಓಟಿಗಾಗಿ ಕಣ್ಣೀರು ಹಾಕಿದ್ದಾರೆ. ಈ ರೀತಿ ಸುಳ್ಳು ಹೇಳಿದ್ದರಿಂದಲೇ ನಾನು ಪಕ್ಷ ತೊರೆದಿದ್ದು, ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳಿ ಕಣ್ಣೀರು ಹಾಕಬೇಡಿ' ಎಂದು ಹೇಳಿದ್ದಾರೆ.
'ನಾರಾಯಣಗೌಡ ಗೆದ್ದರೆ ಕೆ.ಆರ್.ಪೇಟೆಯನ್ನು ಕಾಮಾಟಿಪುರ ಮಾಡುತ್ತಾರೆ' ಎಂದು ಡಿ.ಸಿ.ತಮ್ಮಣ್ಣ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಗೌಡ, 'ನಾನು ಕಾಮಾಟಿಪುರ ನೋಡಿಲ್ಲ, ಅದೆಲ್ಲಾ ಡಿ.ಸಿ.ತಮ್ಮಣ್ಣ ಗೆ ಗೊತ್ತು, ಅದು ಅವರ ಅನುಭವ' ಎಂದು ಹೇಳಿದರು.












Click it and Unblock the Notifications