H.D Kumaraswamy: ಡಿನೋಟಿಫಿಕೇಶನ್ ಆರೋಪ ಒಂದು ಕಾಂಗ್ರೆಸ್ ಟೂಲ್‌ಕಿಟ್; ಹೆಚ್‌ಡಿಕೆ
ತಮ್ಮ ಮೇಲೆ ಬಂದಿರುವ ಡಿನೋಟಿಫಿಕೇಶನ್ ಆರೋಪಕ್ಕೆ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರದ ಮೂವರು ಸಚಿವರ ವಿರುದ್ಧ ಹರಿಹಾಯ್ದಿರುವ ಅವರು, ನನ್ನ ವಿರುದ್ಧ ಅಪಪ್ರಚಾರ ಮಾಡಲು ಕಾಂಗ್ರೆಸ್ ಟೂಲ್‌ಕಿಟ್ ರೂಪಿಸಿದೆ ಎಂದು ಆರೋಪಿಸಿದ್ದಾರೆ. ಕಂದಾಯ ಸಚಿವರ ಮಾಧ್ಯಮಗೋಷ್ಠಿಯನ್ನು ಲೇವಡಿ ಮಾಡಿರುವ ಅವರು ಅದೊಂದು ಸ್ಕ್ರಿಪ್ಟೆಟ್ ಮಾಧ್ಯಮಗೋಷ್ಠಿ ಎಂದು ಕರೆದಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಅನ್ನು ಮೂವರು ಸಚಿವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅಂದು ಮುಖ್ಯಮಂತ್ರಿ ಆಗಿದ್ದ ನಾನೇನು ಬರೆದಿದ್ದೇನೆ, ನಾನೇನು ಆದೇಶ ಮಾಡಿದ್ದೇನೆ ಎಂಬುದು ಅವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ತಮ್ಮ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮಾಡಲು ಸಚಿವರಿಗೆ ಬರೆದುಕೊಡಲಾಗಿದ್ದ ಟೂಲ್ ಕಿಟ್ ಪ್ರತಿಯನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ ಹೆಚ್‌ಡಿಕೆ, ನಾನು ಕೇಂದ್ರ ಸಚಿವನಾಗಿದ್ದು ಇವರಿಗೆ ಸಹಿಸಲು ಆಗುತ್ತಿಲ್ಲ. ಹೇಗಾದರೂ ನನ್ನನ್ನು ಕಟ್ಟಿ ಹಾಕಲು ಇವರು ಸಂಚು ಮಾಡುತ್ತಿದ್ದಾರೆ. ನನ್ನ ವಿರುದ್ಧ ಒಂದು ವ್ಯವಸ್ಥಿತ ಟೂಲ್ ಕಿಟ್ ರೆಡಿ ಮಾಡಿದ್ದಾರೆ. ಅದನ್ನೇ ಸಚಿವರು ಬಾಯಿಪಾಠ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸರಿಯಾಗಿ ಸ್ಕ್ರಿಪ್ಟ್ ಬರೆದುಕೊಟ್ಟಿಲ್ಲ
ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಅವರಿಗೆ ಯಾರೋ ಸರಿಯಾಗಿ ಸ್ಕ್ರಿಪ್ಟ್ ಬರೆದು ಕೊಟ್ಟಿಲ್ಲ. ನನ್ನ ವಿರುದ್ಧ ಸುಳ್ಳಿನ ಕಥೆ ಕಟ್ಟಿದ್ದಾರೆ. ನಾನು ಎಲ್ಲೂ ಕದ್ದು ಹೋಗುವ ಪ್ರಶ್ನೆಯೇ ಇಲ್ಲ ಎಂದರು. ನಾನು ಕೇಂದ್ರ ಸಚಿವನಾಗಿದ್ದನ್ನು ಸಹಿಸದೆ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಟೀಕೆ ಮಾಡುತ್ತಿದ್ದಾರೆ, ಕಾಂಗ್ರೆಸ್ ಸರ್ಕಾರಕ್ಕೆ ನಾನು ಟಾರ್ಗೆಟ್ ಆಗಿದ್ದೇನೆ ಎಂದರು.
ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಕಿಡಿಕಾರಿದ ಅವರು, "ಮಿಸ್ಟರ್ ಕೃಷ್ಣ ಭೈರೇಗೌಡ.. ನನ್ನನ್ನು ಅಲುಗಾಡಿಸಲು ನಿಮ್ಮಿಂದ ಸಾಧ್ಯವಿಲ್ಲ. ನೀವು ಏನೆಲ್ಲ ಷಡ್ಯಂತ್ರ ಮಾಡಿದರೂ ನನ್ನ ಬಗ್ಗೆ ಏನೂ ಸಿಗುವುದಿಲ್ಲ. ಕಂದಾಯ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ, ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ ಹಗರಣಗಳೆಲ್ಲಾ ಹೊರಗೆ ಬರುತ್ತದೆ" ಎಂದು ಎಚ್ಚರಿಕೆ ನೀಡಿದರು.
ಕಂದಾಯ ಸಚಿವರು ವಿದೇಶದಲ್ಲಿ ಓದಿಕೊಂಡು ಬಂದವರು, ನಾನು ಹರದನಹಳ್ಳಿಯ ಶಾಲೆಯಲ್ಲಿ ಓದಿ ಬೆಳೆದವನು. ಪ್ರಕರಣದ ಬಗ್ಗೆ ಸರಿಯಾದ ದಾಖಲೆ ಇಟ್ಟುಕೊಂಡು ಮಾಧ್ಯಮಗೋಷ್ಠಿ ನಡೆಸಬೇಕಿತ್ತು ಅಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ವರ್ಗಾವಣೆ ದಂಧೆ ಸೇರಿ ಅನೇಕ ಅಕ್ರಮಗಳಲ್ಲಿ ತೊಡಗಿದೆ. ಪ್ರತಿಪಕ್ಷದಲ್ಲಿ ಇರುವ ನಾನು ಸಹಜವಾಗಿಯೇ ಪ್ರಶ್ನೆ ಮಾಡಿದ್ದೇನೆ. ಅದೇ ಅಪರಾಧ ಎನ್ನುವಂತೆ ಆಡುತ್ತಿದ್ದಾರೆ. ನಾನು ಸಿದ್ದರಾಮಯ್ಯ ಅವರಂತೆ ಹಲ್ಕಾ ಕೆಲಸ ಮಾಡಿಲ್ಲ ಎಂದು ಹೇಳಿದರು.
ಮೂಡಾ ಹಗರಣದಲ್ಲಿ ಸರ್ಕಾರಿ ಜಮೀನನ್ನು ಹೇಗೆ ಕಬಳಿಸಿದ್ದಾರೆ ಎಂಬುದನ್ನು ದಾಖಲೆಗಳೇ ಜಗಜ್ಜಾಹೀರು ಮಾಡಿವೆ. ಆದರೆ, ಅದನ್ನು ಮುಚ್ಚಿಹಾಕಿಕೊಳ್ಳಲು ಆರೋಪ ಮಾಡಿದವರ ವಿರುದ್ಧವೇ ಪ್ರತ್ಯಾರೋಪ ಮಾಡಲಾಗುತ್ತಿದೆ ಎಂದರು.












Click it and Unblock the Notifications