ಮೈಸೂರು; ಪೈಪ್ ಒಳಗೆ ನುಗ್ಗಿದ್ದ ಚಿರತೆ ಕೂಡಿ ಹಾಕಿದ ಗ್ರಾಮಸ್ಥರು
ಮೈಸೂರು, ನವೆಂಬರ್ 16: ನಾಯಿಯನ್ನು ತಿಂದು ದೊಡ್ಡ ಖಾಲಿ ಪೈಪ್ ಒಳಗೆ ನುಗ್ಗಿದ್ದ ಚಿರತೆಯನ್ನು ಗ್ರಾಮಸ್ಥರೇ ಸೇರಿ ಕೂಡಿ ಹಾಕಿರುವ ಘಟನೆ ಮೈಸೂರಿನ ಇಲವಾಲ ಹೋಬಳಿಯ ಹಳೇ ರಾಮನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಹಳೇ ರಾಮನಹಳ್ಳಿಯಲ್ಲಿ ಹಲವು ದಿನಗಳಿಂದ ಚಿರತೆ ಹಾವಳಿ ಆರಂಭವಾಗಿತ್ತು. ಗ್ರಾಮದ ಸುತ್ತಮುತ್ತ ಸುಳಿದಾಡುತ್ತಾ ಜನರಲ್ಲಿ ಭೀತಿ ಉಂಟುಮಾಡಿತ್ತು. ಅಷ್ಟಲ್ಲದೇ ರಾತ್ರಿ ಸಮಯ ಗ್ರಾಮಕ್ಕೆ ನುಗ್ಗಿ ಜಾನುವಾರುಗಳನ್ನು ಹೊತ್ತೊಯ್ಯುತ್ತಿತ್ತು. ಇದರಿಂದ ಗ್ರಾಮಸ್ಥರು ಭಯದ ನಡುವೆಯೇ ಓಡಾಡುತ್ತಿದ್ದರು.
ಸೋಮವಾರವೂ ಗ್ರಾಮಕ್ಕೆ ಬಂದಿದ್ದ ಚಿರತೆ ನಾಯಿಯೊಂದನ್ನು ತಿಂದು ಹಾಕಿದೆ. ಇದೇ ಸಮಯ ಜನರನ್ನು ನೋಡಿದ ಚಿರತೆ ಗಾಬರಿಯಿಂದ ಅಲ್ಲೇ ಸಮೀಪವಿದ್ದ ನೀರಿನ ದೊಡ್ಡ ಖಾಲಿ ಪೈಪ್ ಒಳಗೆ ನುಗ್ಗಿದೆ. ಚಿರತೆ ಪೈಪ್ ಒಳಗೆ ಸೇರುತ್ತಿದ್ದಂತೆ ಗ್ರಾಮಸ್ಥರು ಪೈಪ್ ಮುಚ್ಚಿದ್ದಾರೆ.

ಚಿರತೆಯ ಅಪಾಯ ಅರಿತು ಹಳೇ ರಾಮನಹಳ್ಳಿ ಗ್ರಾಮಸ್ಥರು ತಕ್ಷಣವೇ ಬರುವಂತೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಾಹಿತಿ ನೀಡಿದ ಬಳಿಕವೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಗ್ರಾಮಸ್ಥರು ಚಿರತೆ ಕೂಡಿ ಹಾಕಿದ ಜಾಗದಲ್ಲೇ ಮೊಕ್ಕಾಂ ಹೂಡಿ ಅರಣ್ಯಾಧಿಕಾರಿಗಳಿಗೆ ಎದುರು ನೋಡುತ್ತಿದ್ದಾರೆ.












Click it and Unblock the Notifications