MUDA Site: ಎಚ್. ವಿಶ್ವನಾಥ್ ಅವರ ಪತ್ನಿಗೂ ಬದಲಿ ನಿವೇಶನ ನೀಡಲಾಗಿದೆ: ಮುಡಾ ಅಧ್ಯಕ್ಷ ಮರಿಗೌಡ ಆರೋಪ
ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ತಮ್ಮ ಪತ್ನಿಗೆ ದೇವನೂರು ಮೂರನೇ ಹಂತದ ಬಡಾವಣೆಯಲ್ಲಿ ಬದಲಿ ನಿವೇಶನ ಕೊಡಿಸಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ.ಮರಿಗೌಡ ಆರೋಪಿಸಿದ್ದಾರೆ.
ನಗರದ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪತ್ನಿ ಹೆಸರಿನಲ್ಲಿಯೇ ಬದಲಿ ನಿವೇಶನ ಪಡೆದಿರುವ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಟೀಕೆ ಮಾಡುತ್ತಿರುವುದು ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ. ವಿಶ್ವನಾಥ್ ಅವರ ಪತ್ನಿ ಶಾಂತಮ್ಮ ಅವರು ದೇವನೂರು ಮೂರನೇ ಹಂತದಲ್ಲಿ 2525 ಸಂಖ್ಯೆಯ 40*60 ಚದರ ಅಡಿ ನಿವೇಶನ ಪಡೆದಿದ್ದರು. ಬಳಿಕ ಅದನ್ನು ರಿಂಗ್ ರಸ್ತೆಗೆ ಸಮೀಪ ಇರುವ 307 ಸಂಖ್ಯೆಯ ನಿವೇಶನಕ್ಕೆ ಬದಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಶಾಸಕ ಹರೀಶ್‌ಗೌಡ ಮಾತನಾಡಿ, ಸಿಎಂ ಪತ್ನಿ ಪಾರ್ವತಿ ಅವರು ಪರಭಾರೆಯಾದ ಜಮೀನು ವಾಪಾಸು ಪಡೆಯಲು ಮುಡಾಗೆ 2014 ರಲ್ಲೇ ಅರ್ಜಿ ಹಾಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ಭೂಮಿ ಆಸೆ ಇದ್ದಿದ್ದರೆ 2014ರಲ್ಲೇ ಸಿಎಂ ಆಗಿದ್ದಾಗಲೇ ಜಮೀನು ವಶಪಡಿಸಿಕೊಳ್ಳಬಹುದಿತ್ತು ಅಥವಾ ಬದಲಿ ನಿವೇಶನ ಪಡೆದುಕೊಳ್ಳಬಹುದಿತ್ತು. ಆದರೆ, ಅವರು ಹಾಗೆ ಮಾಡದೆ ಕಾನೂನಾತ್ಮಕವಾಗಿ ನಡೆಯಲು ಅನುವು ಮಾಡಿಕೊಟ್ಟರು ಎಂದು ಹೇಳಿದರು.
ತನಿಖೆ ವರದಿ ಬರಲಿ
50:50 ಅನುಪಾತದಲ್ಲಿ ಎಷ್ಟು ನಿವೇಶನಗಳನ್ನು ಹಂಚಲಾಗಿದೆ ಎಂಬ ಮಾಹಿತಿಯನ್ನು ಮುಂದಿನ ಮುಡಾ ಸಭೆಗೆ ಇಡಲಾಗುವುದು. ಯಾರೇ ಅಕ್ರಮ ಎಸಗಿದ್ದರೂ ಸರಕಾರ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಕಾನೂನಾತ್ಮಕವಾಗಿಯೇ ನಿವೇಶನ ಹಂಚಿಕೆ ಆಗಿದೆ ಎಂದು ಸಮರ್ಥಿಸಿಕೊಂಡರು
ಮುಂದುವರಿದ ವಿಚಾರಣೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ನಿವೇಶನ ಹಂಚಿಕೆಗೆ ಸಂಬಂಧಿಸಿದ ಅಕ್ರಮಗಳ ಕುರಿತ ವಿಚಾರಣೆಗಾಗಿ ರಾಜ್ಯ ಸರಕಾರ ನೇಮಿಸಿರುವ ತನಿಖಾ ಸಮಿತಿಯು ಸೋಮವಾರ ವಿಚಾರಣೆ ಮುಂದುವರಿಸಿದೆ. ಜುಲೈ 3ರಿಂದ ನಾಲ್ಕು ದಿನ ಬಿಡದೆ ಕಡತಗಳ ಪರಿಶೀಲನೆ ನಡೆಸಿದ್ದ ತನಿಖಾ ತಂಡದ ಅಧಿಕಾರಿಗಳು, ಭಾನುವಾರ ರಜಾ ದಿನವಾಗಿದ್ದರಿಂದ ವಿಚಾರಣೆಗೆ ಬ್ರೇಕ್ ನೀಡಿದ್ದರು. ಸೋಮವಾರ ವಿಚಾರಣೆ ಆರಂಭಿಸಿ ತನಿಖೆ ತೀವ್ರಗೊಳಿಸಿದ್ದಾರೆ.












Click it and Unblock the Notifications