ಚುನಾವಣೆಗೆ ಅಂದ್ಮೇಲೆ ಪಕ್ಷ ಹಣ ಕೊಡುವುದು ಸಹಜ: ಲೆಕ್ಕ ಕೇಳಲು ಶ್ರೀನಿವಾಸ ಪ್ರಸಾದ್ ಯಾರು? ಎಚ್.ವಿಶ್ವನಾಥ್ ಪ್ರಶ್ನೆ
ಮೈಸೂರು, ಡಿಸೆಂಬರ್, 18: ಚುನಾವಣೆ ಅಂದಮೇಲೆ ಪಕ್ಷ ಹಣ ಕೊಡುವುದು ಸಹಜವಾಗಿರುತ್ತದೆ. ಲೆಕ್ಕ ಕೇಳಲು ಶ್ರೀನಿವಾಸ್ ಪ್ರಸಾದ್ ಯಾರು? ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಸೈನಿಕನ ಕೈಗೆ ಹಣ ಕೊಟ್ಟು ಕಳುಹಿಸಿದ್ದರು. ಸೈನಿಕ ಹುಣಸೂರಿಗೆ ಬರಲಿಲ್ಲ. ಈ ವಿಚಾರ ಈಗಾಗಲೇ ಹೇಳಿದ್ದೇನೆ. ಶ್ರೀನಿವಾಸ್ ಪ್ರಸಾದ್‌ಗೆ ಅವರಿದ್ದ ಪಕ್ಷಗಳು ಹಣ ನೀಡಿಲ್ಲವೇ? ನನಗೆಷ್ಟು ದುಡ್ಡು ಬಂದಿದೆ ಎಂದು ಶ್ರೀನಿವಾಸ್ ಪ್ರಸಾದ್‌ಗೆ ಹೇಗೆ ಗೊತ್ತು? ಗೊತ್ತಿಲ್ಲದ ವಿಚಾರವನ್ನು ಅವರು ಏಕೆ ಮಾತನಾಡುತ್ತಾರೆ? ಅವರು ಪ್ರಬುದ್ಧರಿದ್ದಾರೆ. ಹೀಗೆಲ್ಲಾ ಮಾತನಾಡಬಾರದು ಎಂದು ಮಾತಿನಲ್ಲಿ ತಿವಿದರು.
ಶ್ರೀನಿವಾಸ್ ಪ್ರಸಾದ್ ಅವರೇ ಮೊದಲು ನನ್ನ ಬಗ್ಗೆ ಮಾತನಾಡಿದ್ದಾರೆ. ನಾನು ಅವರ ಬಗ್ಗೆ ಮೊದಲು ಮಾತನಾಡಲಿಲ್ಲ. ಇದೆಲ್ಲಾ ಒಳ್ಳೆಯ ಬೆಳವಣಿಗೆಯಲ್ಲ. ಶ್ರೀನಿವಾಸ್ ಪ್ರಸಾದ್ ದಲಿತರ ಕಷ್ಟಕ್ಕಾಗದ ರಾಜಕಾರಣಿ ಆಗಿದ್ದಾರೆ. ಹುಟ್ಟೂರು ಅಶೋಕಪುರಂಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸುವ ಮೂಲಕ ಎಂಎಲ್‌ಸಿ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.

ದಲಿತರ ಪರವಾಗಿ ನೀವು ಧ್ವನಿ ಎತ್ತಿದ್ದೀರಾ?
ದಲಿತರಿಗೆ ಅನ್ಯಾಯವಾದಾಗ ಎಲ್ಲಿ ಹೋಗಿದ್ದೀರಿ ಶ್ರೀನಿವಾಸ್ ಪ್ರಸಾದ್? ಮುರುಘಾ ಶ್ರೀ ದಲಿತರ ಹೆಣ್ಣು ಮಗಳನ್ನು ಕೆಡಿಸಿದ, ಅಂಬೇಡ್ಕರ್ ಮೊಮ್ಮಗ ಆನಂದ ತೇಲ್ತುಂಬ್ದೆ ಅವರನ್ನು ಬಂಧಿಸಿ ಜೈಲಿಗೆ ಇಡಲಾಗಿದೆ. ದಲಿತರ ಮೇಲೆ ಹೀಗೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ಯಾವ ಸಂದರ್ಭದಲ್ಲಾದರೂ ನೀವು ಧ್ವನಿ ಎತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಶ್ರೀನಿವಾಸ್ ಬೀದಿ ರೌಡಿ ರೀತಿ ಮಾತನಾಡಿದ್ದಾರೆ
ನೀವು ವೈಟ್ ಕಾಲರ್ ರಾಜಕಾರಣಿಯಾಗಿದ್ದು, ಯಾವುದೋ ಬೀದಿ ರೌಡಿ ರೀತಿ ಮಾತನಾಡಿದ್ದೀರಿ. ನನ್ನ ವಿರುದ್ಧ ಬಳಸಿರುವ ಪದಗಳನ್ನು ಜನ ಕ್ಷಮಿಸುವುದಿಲ್ಲ. ಕಚ್ಚುತ್ತಾನೆ, ಬೊಗಳುತ್ತಾನೆ ಇದೆಲ್ಲಾ ನೀವು ಬಳಸುವ ಪದಗಳಾ? ಇದನ್ನೆಲ್ಲ ಇಲ್ಲಿಗೆ ಬಿಟ್ಟು ಗೌರವಯುತವಾಗಿ ನಡೆದುಕೊಳ್ಳಿ. ನಾನು ನಿಮಗಿಂತಲೂ ಸೀನಿಯರ್ ಇದ್ದೀನಿ. ಇಬ್ಬರು ಸ್ನೇಹಿತರಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು ಎಂದು ಹೇಳಿದರು.

ಪ್ರತಾಪ್ ಸಿಂಹ ವಿರುದ್ಧ ಹಳ್ಳಿಹಕ್ಕಿ ಕಿಡಿ
"ಪ್ರತಾಪ್ ಸಿಂಹನಾ ಛೀ ಥೂ ಅವನು ಯಾವನ್ರಿ? ಅವನೇನು ಲೀಡರ್ ಏನ್ರಿ? ಅವನನ್ನ ಗೆಲ್ಲಿಸಿದ್ದು ಜೆಡಿಎಸ್‌ನವವರು. ನನ್ನನ್ನು ಪಕ್ಷ ಬಿಡು ಅನ್ನಲು ಇವನ್ಯಾರು?. ನಾನು ಮಾತನಾಡಿರುವುದು ಸರಿಯೋ ತಪ್ಪೋ, ಅದನ್ನು ಕೇಳುವುದಕ್ಕೆ ರಾಜ್ಯಾಧ್ಯಕ್ಷರು ಇದ್ದಾರೆ. ನೀನೇನು ರಾಜ್ಯಾಧ್ಯಕ್ಷನೇ? ಪ್ರತಾಪ್ ಸಿಂಹಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?. ನೀನೆ ಸರಿಯಿಲ್ಲ, ಇನ್ನು ಬೇರೆಯವರಿಗೆ ಬುದ್ದಿ ಹೇಳುವ ಕೆಲಸವನ್ನು ಮಾಡುತ್ತಿದ್ದೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಾಪ್ ಸಿಂಹಗೆ ನಾಚಿಕೆ ಆಗಬೇಕು- ಹಳ್ಳಿಹಕ್ಕಿ
ಬೇರೆಯವರು ಮಾಡಿರುವ ಕೆಲಸವನ್ನು ನಾನು ಮಾಡಿದ್ದು ಅಂತಾ ಹೇಳಿಕೊಂಡು ತಿರುಗುತ್ತಿದ್ದೀಯಾ. ನಾಚಿಕೆ ಆಗಬೇಕು ನಿನಗೆ. ಆಸ್ಕರ್ ಫರ್ನಾಂಡಿಸ್ ಅವರ ಕಾಲದ ರಸ್ತೆಯನ್ನು ನಾನು ಮಾಡಿಸಿದೆ ಅಂತಿದ್ದೀಯಾ. ಡಾಕ್ಯುಮೆಂಟ್ ತೆಗೆದುಕೊಂಡು ಬರುತ್ತೇನೆ. ಆಗ ರಸ್ತೆ ಯಾರಿಂದ ಆಗಿದೆ ಅನ್ನುವುದನ್ನು ತೋರಿಸುತ್ತೇನೆ," ಎಂದು ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿಯವರು ಎಂದೂ ಯಾವುದೇ ಧರ್ಮದ ಬಗ್ಗೆ, ಜಾತಿಯ ಬಗ್ಗೆ ಮಾತನಾಡಿಲ್ಲ. ಯಾವುದೇ ಧರ್ಮ ಜಾತಿಗೆ ವಿರೋಧವಾಗಿ ಮಾತನಾಡಿಲ್ಲ. ಇಲ್ಲಿನ ಬಿಜೆಪಿ ನಾಯಕರು ಧರ್ಮ, ಜಾತಿ ಅಂತಾರೆ. ನಾನು ಯಾವುದೇ ಪಕ್ಷದಲ್ಲಿದ್ದರೂ ಅಲ್ಲಿನ ತಪ್ಪುಗಳನ್ನು ಹೇಳುತ್ತೇನೆ ಎಂದರು.











Click it and Unblock the Notifications