ಈ ಮೂರು ಅಂಶಗಳೇ ಸಿದ್ದರಾಮಯ್ಯ ಸೋಲಿಗೆ ಕಾರಣ ಎಂದ ವಿಶ್ವನಾಥ್
ಮೈಸೂರು, ಡಿಸೆಂಬರ್ 19- "ನಿಮ್ಮ ಅಹಂ, ನಿಮ್ಮ ದುರಂಹಕಾರ, ಏಕ ವಚನದಲ್ಲಿ ಮತ್ತೊಬ್ಬರನ್ನು ನಿಂದಿಸುವುದು" ಈ ಮೂರು ಅಂಶಗಳಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಾಯಿತು ಎಂದು ವಿಧಾನ ಪರಿಷತ್ಯ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವಪಕ್ಷೀಯರಿಂದ ಸೋಲಾಯಿತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದು, "ನಿಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದವರನ್ನೇ ಪಕ್ಷದಿಂದ ಹೊರ ಹೋಗುವಂತೆ ಮಾಡಿದಿರಿ. ಸದಾ ಬೇರೊಬ್ಬರಿಗೆ ಇರಿಯುತ್ತಾ ಬಂದ ನಿಮಗೆ ಈಗ ಇರಿತದ ನೋವು ಏನೆಂಬುದು ಗೊತ್ತಾಗಿದೆ" ಎಂದು ಹೇಳಿದ್ದಾರೆ.
ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಿಂದ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಲೋಕಾಯುಕ್ತದ ಶಕ್ತಿ ಕುಂದಿಸಿದಿರಿ. ಯಾವ ಪಕ್ಷ ನಿಮ್ಮನ್ನು ಮುಖ್ಯಮಂತ್ರಿ ಮಾಡಿತೋ ಅದೇ ಪಕ್ಷವನ್ನು ನೀವು ನಿರ್ನಾಮ ಮಾಡಿದಿರಿ ಎಂದು ಹಲವು ಅಂಶಗಳನ್ನು ಬಿಡಿಸಿಟ್ಟು ಸಿದ್ದರಾಮಯ್ಯಗೆ ಕುಟುಕಿದರು.

ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಪ್ರತಿ ಸ್ಪರ್ಧಿಗಳಾಗಿದ್ದವು. ಇದರಿಂದ ಆ ಎರಡು ಪಕ್ಷಗಳಲ್ಲಿ ಒಳ ಒಪ್ಪಂದ ಸಾಧ್ಯವಿಲ್ಲ. ನಿಮಗೆ ಕುರುಬ ಸಮುದಾಯ ಕೂಡ ಪೂರ್ಣ ಪ್ರಮಾಣದಲ್ಲಿ ಓಟ್ ಹಾಕಲಿಲ್ಲ. ನಿಮ್ಮ ಮೇಲಿನ ಬೇಸರದಿಂದ ನಿಮ್ಮನ್ನು ಬಿಟ್ಟು ಮತ್ತೊಂದು ಪಕ್ಷಕ್ಕೆ ಕುರುಬ ಸಮುದಾಯ ಓಟ್ ಹಾಕಿತು ಎಂದು ವಿಶ್ವನಾಥ್ ಹೇಳಿದ್ದಾರೆ.












Click it and Unblock the Notifications