ಮದುವೆಗೆ ಒಂದು ದಿನ ಮುಂಚೆ ಪ್ರೇಯಸಿಯೊಂದಿಗೆ ವರ ಪರಾರಿ; ನಿಂತ ಮದುವೆ
ಮೈಸೂರು, ಡಿಸೆಂಬರ್ 9: ಇತ್ತೀಚೆಗೆ ವಧು ಅಥವಾ ವರ ಮದುವೆಗೆ ಮುನ್ನವೇ ಪರಾರಿ ಆಗುವುದು ಮಾಮೂಲಿ ಆಗಿ ಬಿಟ್ಟಿದೆ. ಈಗ ಮೈಸೂರಿನ ವರ ಮಹಾಶಯನೋರ್ವ, ಮದುವೆಯ ಮುನ್ನಾ ದಿನ ವಧುವಿಗೆ ಕೈಕೊಟ್ಟು ಪ್ರೇಯಸಿಯ ಜೊತೆ ಪರಾರಿಯಾದ ಘಟನೆ ನಡೆದಿದೆ.
ಮೈಸೂರಿನ ಕೆ.ಆರ್.ಮೊಹಲ್ಲಾದ ಒಂದನೇ ಕ್ರಾಸ್ ನ ನಿವಾಸಿ ಈಶ್ವರ್ ಮತ್ತು ವರಲಕ್ಷ್ಮಿ ದಂಪತಿಯ ಪುತ್ರಿ ಸಿಂಚನ ಅವರ ವಿವಾಹವು ಕೆ.ಆರ್.ಮೊಹಲ್ಲಾದ ಸುಣ್ಣದ ಕೇರಿ 4ನೇ ಕ್ರಾಸ್ ನಿವಾಸಿ ತಾಂಡೇಶ್ ಮತ್ತು ಮೀನಾ ದಂಪತಿಯ ಪುತ್ರ ಉಮೇಶ್ ಟಿ.ಎಂಬಾತನೊಂದಿಗೆ ವಿವಾಹ ನಿಶ್ಚಯವಾಗಿತ್ತು.
ಮಂಗಳವಾರ ಸಂಜೆ 7 ಗಂಟೆಗೆ ನಾರಾಯಣ ಶಾಸ್ತ್ರೀ ರಸ್ತೆಯಲ್ಲಿರುವ ಶ್ರೀಮಹದೇಶ್ವರ ದೇವಸ್ಥಾನದ ನಾಯಕರ ಸಮುದಾಯ ಭವನದಲ್ಲಿ ಆರತಕ್ಷತೆ ಇತ್ತು. ಬುಧವಾರ ಮಧ್ಯಾಹ್ನ 1.45 ರಿಂದ 2.15 ರವರೆಗೆ ಧಾರಾ ಮುಹೂರ್ತವಿತ್ತು. ಆದರೆ ಮಂಗಳವಾರ ಬೆಳ್ಳಂಬೆಳಿಗ್ಗೆಯೇ ವರ ಮಹಾಶಯ, ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಆರತಕ್ಷತೆ ರದ್ದಾಗಿದೆ.

ಈಗ ವಧುವಿನ ಕುಟುಂಬಸ್ಥರು ಕಂಗಾಲಾಗಿ ಕುಳಿತಿದ್ದಾರೆ. ಮದುವೆಗೆಂದು ದೂರದ ಊರುಗಳಿಂದ ನೆಂಟರಿಷ್ಟರು ಆಗಮಿಸಿದ್ದು, ಅವರಿಗೆ ಮುಖ ತೋರಿಸುವುದು ಹೇಗೆ ಎಂದು ವರನ ಪೋಷಕರು ಅಲವತ್ತುಕೊಂಡರೆ, ವಧುವಿನ ಪೋಷಕರು ಮಗಳ ವಿವಾಹ ನಿಂತಿದ್ದಕ್ಕೆ ಕೆ.ಆರ್ ಪೊಲೀಸ್ ಠಾಣೆಯಲ್ಲಿ ವರ ಉಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ವಧು-ವರರು ತಮ್ಮ ಇಷ್ಟವನ್ನು ಮೊದಲೇ ತಿಳಿಸಿಬಿಟ್ಟರೆ ಎರಡೂ ಕುಟುಂಬಗಳ ಸಹಸ್ರಾರು ರುಪಾಯಿ ಮದುವೆ ವೆಚ್ಚ, ಉತ್ಸಾಹ ವ್ಯರ್ಥ, ನೆಂಟರುಗಳು, ಸಂಬಂಧಿಕರು ಕೆಲಸ ಕಾರ್ಯ ಬಿಟ್ಟು ಮದುವೆಗೆ ಆಗಮಿಸುವ ವೆಚ್ಚ ಎಲ್ಲವೂ ಉಳಿಯುತ್ತದೆ. ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












Click it and Unblock the Notifications