Mysuru Dasara 2022 : ಅದ್ಧೂರಿಯಾಗಿ ನಡೆಯಲಿದೆ ಮೈಸೂರು ದಸರಾ, ಗರಿಗೆದರಿದ ಪ್ರವಾಸೋದ್ಯಮ
ಮೈಸೂರು, ಸೆಪ್ಟೆಂಬರ್ 12: ನಾಡಹಬ್ಬ ಮೈಸೂರು ದಸರಾ 2022ಕ್ಕೆ ಕ್ಷಣಗಣನೆ ಆರಂಭವಾತ್ತಿದ್ದಂತೆ ಕರ್ನಾಟಕದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ಸೆಪ್ಟೆಂಬರ್ 26ರಂದು ಚಾಮುಂಡಿ ಬೆಟ್ಟದ ಮೇಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಈ ಮೂಲಕ ದ್ರೌಪದಿ ಮುರ್ಮು ದಸರಾ ಉದ್ಘಾಟನೆಯಲ್ಲಿ ಭಾಗವಹಿಸುವ ಮೊದಲ ರಾಷ್ಟ್ರಪತಿಯಾಗಲಿದ್ದಾರೆ. ಜೂನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರದಲ್ಲಿದ್ದನ್ನು ನಾವು ಸ್ಮರಿಸಬಹುದು.
ಮೈಸೂರು ದಸರಾದ 412 ನೇ ಆವೃತ್ತಿಯ ಅದ್ದೂರಿ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಧಿಕಾರಿಗಳು ದಸರಾ ಉಪ ಸಮಿತಿಗಳ ಸದಸ್ಯರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯುತ್ತಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ದಸರಾ ಆಚರಣೆ ಸರಳವಾಗಿ ನಡೆದಿತ್ತು. ಈ ವರ್ಷ ಸಾಂಕ್ರಾಮಿಕ ರೋಗವು ನಿಯಂತ್ರಣದಲ್ಲಿರುವದರಿಂದ ಪ್ರವಾಸೋದ್ಯಮದ ಮಧ್ಯಸ್ಥಗಾರರ ಸಲಹೆಯಂತೆ ಸರ್ಕಾರವು ಅದ್ಧೂರಿ ದಸರಾ ಆಚರಿಸಲು ನಿರ್ಧರಿಸಿದೆ.
ದಸರಾ ಉದ್ಘಾಟನೆಗೆ ಇನ್ನು ಕೇವಲ 15 ದಿನಗಳು ಬಾಕಿಯಿದ್ದು, ಹೋಟೆಲ್ ಉದ್ಯಮಿಗಳಿಗೆ ಸಾಕಷ್ಟು ವಿಚಾರಣೆಗಳು ಮತ್ತು ವಸತಿಗಾಗಿ ಬುಕ್ಕಿಂಗ್‌ಗಳು ಬರುತ್ತಿದ್ದು, ಅವರಿಗೆ ಸಮಾಧಾನವಾಗಿದೆ. ಈ ವರ್ಷ ದಸರಾ ಜನರನ್ನು ಸೆಳೆಯಲು ಜಿಲ್ಲಾಡಳಿತವು ಕೋವಿಡ್‌ಗೆ ಮುನ್ನ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಯೋಜಿಸಿದೆ.
ಈ ಬಾರಿಯ ದಸರಾಕ್ಕೆ ಗೋಲ್ಡ್ ಕಾರ್ಡ್ ನೀಡುವುದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಗೋಲ್ಡ್ ಕಾರ್ಡ್‌ಗಳು ಪ್ರವಾಸಿಗರಿಗೆ ಜಂಬೂ ಸವಾರಿ ವೀಕ್ಷಿಸಲು ಮೈಸೂರು ಅರಮನೆಗೆ ಪ್ರವೇಶಿಸಲು ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ನೇರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದವು.
ಎರಡು ವರ್ಷಗಳ ನಂತರ ಈ ವರ್ಷ ಬಂಧು ಮಿತ್ರರಿಗೆ ದಸರಾ ಆತಿಥ್ಯ ನೀಡಲು ಸ್ಥಳೀಯರು ಸಜ್ಜಾಗಿದ್ದಾರೆ. ನಗರವು 10 ದಿನಗಳ ಆಚರಣೆಗಳಲ್ಲಿ ಲಕ್ಷಗಟ್ಟಲೆ ಪ್ರವಾಸಿಗರನ್ನು ಸೆಳೆಯುತ್ತದೆ. ಅದರಲ್ಲೂ ವಿಶೇಷವಾಗಿ ವಿಜಯದಶಮಿ ಜಂಬೂ ಸವಾರಿಯ ದಿನದಂದು.

ಉತ್ತಮ ವ್ಯಾಪಾರದ ನಿರೀಕ್ಷೆ
ಕೋವಿಡ್‌ನಿಂದಾಗಿ 2020ರ ದಸರಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಆದಾಗ್ಯೂ, 2021 ರಲ್ಲಿ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿತ್ತು. 2021 ರ ದಸರಾದ ಕೊನೆಯ ಕೆಲವು ದಿನಗಳಲ್ಲಿ ಆಚರಣೆಗಳನ್ನು ಕಡಿಮೆಗೊಳಿಸಿದ ಬಗ್ಗೆ ಆರಂಭದಲ್ಲಿ ಅಸಮಾಧಾನಗೊಂಡ ಪ್ರವಾಸೋದ್ಯಮ ಪಾಲುದಾರರು ಈಗ ಉತ್ತಮ ವ್ಯಾಪಾರ ಹಾಗೂ ವ್ಯವಹಾರ ಚಟುವಟಿಕೆಯ ನಿರೀಕ್ಷೆಯಲ್ಲಿದ್ದಾರೆ.

ವಿಶ್ವದೆಲ್ಲೆಡೆಯಿಂದ ಲಕ್ಷಾಂತರ ಪ್ರವಾಸಿಗರು
ಮೈಸೂರು ಹೋಟೆಲ್ ಮಾಲೀಕರ ಸಂಘದವರು ಅಪಾರ ನಿರೀಕ್ಷೆಗಳನ್ನು ಈ ಬಾರಿಯ ದಸರಾ ಮೇಲೆ ಇಟ್ಟುಕೊಂಡಿದ್ದಾರೆ. ಈ ಬಾರಿ ಪರಿಸ್ಥಿತಿಯು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದ್ದು, ಲಕ್ಷಾಂತರ ಪ್ರವಾಸಿಗರು ವಿಶ್ವದೆಲ್ಲೆಡೆಯಿಂದ ಬಂದು ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆಯು ಬಲಗೊಳ್ಳುವ ಅಗತ್ಯವಿದ್ದು, ಇದಕ್ಕಾಗಿ ತಯಾರಿಗಳು ನಡೆಯುತ್ತಿವೆ.

ಮೈಸೂರು ಸುತ್ತಮುತ್ತ ತಾಣಗಳ ಆಕರ್ಷಣೆ
ಈ ಬಾರಿಯು ಎಲ್ಲ ಬಗೆಯ ದಸರಾ ಅಂದರೆ ರೈತ, ಮಹಿಳಾ, ಮಕ್ಕಳ ದಸರಾ ಇವೇ ಮೊದಲಾದವು ಅದ್ದೂರಿಯಾಗಿ ನಡೆಯುವ ನಿರೀಕ್ಷೆಯಿದೆ. ಹೀಗಾಗಿ ಆಸಕ್ತರು ರಾಜ್ಯದ ಗಡಿಗಳನ್ನು ಮೀರಿ ಪಾಲ್ಗೊಂಡು ಪ್ರವಾಸೋದ್ಯಮವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಮೈಸೂರು ಸುತ್ತಮುತ್ತ ಉತ್ತಮ ಮಳೆಯು ಆಗಿರುವುದರಿಂದ ಬೃಂದಾವನ, ಕೆಆರ್‌ಎಸ್ ಮಾದರಿಯ ತಾಣಗಳು ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸಲಿದೆ.

ಮೈಸೂರು ವಿಮಾನ ನಿಲ್ದಾಣಕ್ಕೆ ಹೆಚ್ಚು ವಿಮಾನಗಳು
ಇದಲ್ಲದೆ ಶ್ರೀರಂಗಪಟ್ಟಣ, ಟಿಪ್ಪು ಅರಮನೆ, ಐತಿಹಾಸಿಕ ತಾಣಗಳು ಪ್ರವಾಸಿಗರನ್ನು ಹಿಡಿದಿಡಲಿವೆ. ಇದಕ್ಕಾಗಿ ಹೆಚ್ಚೆಚ್ಚು ಕರ್ನಾಟಕ ಸಾರಿಗೆ ಬಸ್‌ಗಳು ಜನರಿಗೆ ಲಭ್ಯವಾಗಬೇಕಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ಈಗ ಹೊಸ ಹೊಸ ವಿಮಾನಗಳು ಬರಲಾರಂಭಿಸಿವೆ. ಹೀಗಾಗಿ ಎಲ್ಲೆ ಮೀರಿ ಜನರು ಮೈಸೂರು ಸೌಂದರ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇದಕ್ಕೆ ಸರ್ಕಾರವು ಉತ್ತಮ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ.












Click it and Unblock the Notifications