ಕುಡಿತದ ಚಟದಿಂದ ಬೇಸತ್ತು ಜನ್ಮ ನೀಡಿದ ಅಪ್ಪನ ತಲೆ ಕಡಿದ ಮಗ
ಕೆ.ಆರ್.ಪೇಟೆ (ಮೈಸೂರು), ನವೆಂಬರ್ 25 : ಪ್ರತಿ ದಿನವೂ ಮದ್ಯ ಸೇವಿಸಿ, ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ತಂದೆಯ ಮೇಲೆ ಕೋಪಗೊಂಡ ಮಗ, ಆತನ ತಲೆಯನ್ನು ಕಡಿದು ಹತ್ಯೆಗೈದ ಘಟನೆ ತಾಲೂಕಿನ ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗಂಗೇನಗಳ್ಳಿ ಗ್ರಾಮದ, ಐವತ್ತು ವರ್ಷದ ಮಂಜುನಾಯಕ್ ಎಂಬಾತ ಮಗನಿಂದ ಹತ್ಯೆಗೀಡಾದ ತಂದೆ. ಇಪ್ಪತ್ತು ವರ್ಷದ ದಯಾನಂದ ಕೊಲೆ ಮಾಡಿದ ಮಗ. ಕೂಲಿ ಕೆಲಸ ಮಾಡುತ್ತಿದ್ದ ಮಂಜುನಾಯಕ್ ಕುಡಿತದ ದಾಸನಾಗಿದ್ದು, ಸಂಪಾದನೆಯನ್ನೆಲ್ಲ ಕುಡಿತಕ್ಕೆ ಹಾಕಿ, ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
ಮಂಜುನಾಯಕ ನೀಡುತ್ತಿದ್ದ ಹಿಂಸೆಯನ್ನು ಆತನ ಪತ್ನಿ ನಾಗಮ್ಮ, ಹಿರಿಯ ಮಗ ಆನಂದ, ಕಿರಿಯ ಮಗ ದಯಾನಂದ್ ಸಹಿಸಿಕೊಂಡಿದ್ದರು. ಅಲ್ಲದೆ, ಈ ಬಗ್ಗೆ ಸಾಕಷ್ಟು ಬಾರಿ ಬುದ್ಧಿವಾದವನ್ನು ಕೂಡ ಹೇಳಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಷ್ಟೇ ಅಲ್ಲ, ಅಕ್ಕಪಕ್ಕದ ಮನೆಯವರು, ಗ್ರಾಮದವರು, ನೆಂಟರು ಸಹ ವರ್ತನೆಯನ್ನು ಬದಲಾಯಿಸಿಕೊಳ್ಳಿ, ಕುಡಿಯುವುದನ್ನು ಬಿಟ್ಟು ಬಿಡಿ ಎಂದು ತಿಳಿವಳಿಕೆ ಹೇಳಿದ್ದರು.

ಆದರೂ ತನ್ನ ಚಾಳಿಯನ್ನು ಮಂಜುನಾಯಕ್ ಬಿಟ್ಟಿರಲಿಲ್ಲ. ಅವನಿಗೆ ಬುದ್ಧಿವಾದ ಹೇಳಿದಾಗ ಒಂದೆರೆಡು ದಿನ ಮೌನವಾಗಿರುತ್ತಿದ್ದ ಮಂಜುನಾಯಕ ಮತ್ತೆ ಎಂದಿನಂತೆ ತನ್ನ ಚಾಳಿಯನ್ನು ಮುಂದುವರೆಸಿದ್ದ.
ಕಿರಿಯ ಮಗನಾದ ದಯಾನಂದ್ ಹೊರ ಊರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಶನಿವಾರ ಮನೆಯಲ್ಲಿ ಬೆಳಗ್ಗೆ ಎಂದಿನಂತೆ ಮಂಜುನಾಯಕ್ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ, ತನ್ನ ತಂದೆಯ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾನೆ. ಕಿರುಚಿಕೊಳ್ಳದಂತೆ ತಡೆದು, ಮಂಜುನಾಯಕ್ ತಲೆಯನ್ನು ಮಚ್ಚಿನಿಂದ ಕಡಿದು ಹಾಕಿದ್ದಾನೆ.
ಆ ನಂತರ ರುಂಡವನ್ನು ಟವಲ್ ನಲ್ಲಿ ಸುತ್ತಿಕೊಂಡು ಮನೆಯಿಂದ ಹೊರ ನಡೆದು, ಸುಮಾರು ಎರಡು ಕಿ.ಮೀ. ದೂರವಿರುವ ಕಿಕ್ಕೇರಿಯ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಶರಣಾಗಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾಗರೋಪಾದಿಯಲ್ಲಿ ಬಂದ ಜನರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ.
ಅಷ್ಟೇ ಅಲ್ಲ, ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ಸಿಪಿಐ ವೆಂಕಟೇಶಯ್ಯ, ಪಿಎಸ್ ಐ ಚಂದ್ರಶೇಖರ್ ನೇತೃತ್ವದಲ್ಲಿ ಆರೋಪಿಯನ್ನು ಕರೆದೊಯ್ದು, ಮಹಜರು ನಡೆಸಿದರು.












Click it and Unblock the Notifications