ಮೈಸೂರು; ಕಾಡಿನ ರಕ್ಷಕರಿಗೆ ನಾಲ್ಕು ತಿಂಗಳಿನಿಂದ ಸಂಬಳ ಇಲ್ಲ
ಮೈಸೂರು, ಮಾರ್ಚ್ 09: ಮಳೆ, ಬಿಸಿಲು ಎನ್ನದೇ 24 ಗಂಟೆ ಕಾಡನ್ನು ಸಂರಕ್ಷಣೆ ಮಾಡುತ್ತಿರುವ ಅರಣ್ಯ ವೀಕ್ಷಕರಿಗೆ ನಾಲ್ಕು ತಿಂಗಳಿನಿಂದ ಸಂಬಳ ನೀಡಿಲ್ಲ. ಮೈಸೂರಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮಂದಿ ಹೊರ ಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಅರಣ್ಯ ವೀಕ್ಷಕರು, ಕಚೇರಿ ಸಿಬ್ಬಂದಿ, ಚಾಲಕರು ಸಹ ಇದರಲ್ಲಿ ಸೇರಿದ್ದಾರೆ. 2021ರ ನವೆಂಬರ್ ತಿಂಗಳಿನಿಂದ ಇವರಿಗೆ ವೇತನವನ್ನು ನೀಡಿಲ್ಲ. ಇನ್ನು ಬಂಡೀಪುರ ಹುಲಿ ಸಂಕ್ಷಿತ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಅರಣ್ಯ ವೀಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಎರಡು ತಿಂಗಳಿನಿಂದ ಸಂಬಳವಾಗಿಲ್ಲ. ಪರಿಣಾಮ ಅರಣ್ಯ ವೀಕ್ಷಕರು ಬದುಕು ನಡೆಸುವುದೇ ಕಷ್ಟಕರವಾಗಿದೆ.
ಮಾರ್ಚ್ ಬಂದರೆ ಸಾಕು ಬಂಡೀಪುರ, ನಾಗರಹೊಳೆಯಲ್ಲಿ ಹೈ ಅಲರ್ಟ್ ಶುರುವಾಗುತ್ತದೆ. ಬೇಸಿಗೆ ಕಾಲವಾದ್ದರಿಂದ ಅರಣ್ಯ ವೀಕ್ಷಕರು ಕಾಡನ್ನು ಕಾಡ್ಗಿಚ್ಚಿನಿಂದ ಸಂರಕ್ಷಿಸಲು 24 ಗಂಟೆ ಕೆಲಸ ಮಾಡುತ್ತಾರೆ. ಫೈರ್ ಲೈನ್ ಮಾಡಲು ಅರಣ್ಯ ವೀಕ್ಷಕರು ಇರಲೇಬೇಕು. ತಮ್ಮ ಜೀವವನ್ನು ಪಣಕ್ಕಿಟ್ಟು ಇವರು ಕಾಡನ್ನು ಕಾಯುತ್ತಾರೆ.

ಆದರೆ, ಇಂತಹ ಅರಣ್ಯ ವೀಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳವೇ ಆಗಿಲ್ಲ. ಅರಣ್ಯ ವೀಕ್ಷಕರು ಇತರರಂತೆ ಸಂಬಳವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಸಂಬಳ ನೀಡದೆ ಸತಾಯಿಸುತ್ತಿರುವ ಯಾಕೆ? ಎಂಬುದು ಹಲವರ ಪ್ರಶ್ನೆ.
ರಾಜ್ಯದಲ್ಲಿ ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯ ಪ್ರವಾಸಿಗರ ನೆಚ್ಚಿನ ತಾಣ. ನಿತ್ಯ ನೂರಾರು ಮಂದಿ ಇವೆರಡು ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಕೇರಳ, ತಮಿಳುನಾಡಿನಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ನಿತ್ಯ ಸಾರಿ ಇರುವುದರಿಂದ ಆದಾಯಕ್ಕೂ ಕೊರತೆ ಇಲ್ಲ. ಆದರೂ ಅರಣ್ಯವನ್ನೇ ಜೀವನ ಎಂದು ಭಾವಿಸಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಅರಣ್ಯ ವೀಕ್ಷಕರಿಗೆ ಸಂಬಳ ಕೊಡಲು ಇಲಾಖೆಯಲ್ಲಿ ಹಣ ಇಲ್ಲವೇ? ಎಂಬ ಮಾತುಗಳೂ ಕೂಡ ಕೇಳಿಬಂದಿದೆ.
"ನಾಲ್ಕು ತಿಂಗಳಿಂದ ವೇತನ ಇಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಸಾಲದವರು ಮನೆ ಬಾಗಿಲಿಗೆ ಬಂದು ಗಲಾಟೆ ಮಾಡುತ್ತಿದ್ದಾರೆ. ಸಂಸಾರವೆಂದರೆ ನೂರಾರು ತಾಪತ್ರಯಗಳಿರುತ್ತದೆ. ಅಗತ್ಯ ದಿನಸಿ ಸಾಮಗ್ರಿ ಖರೀದಿ ಮಾಡಲೂ ನಮ್ಮ ಬಳಿ ದುಡ್ಡಿಲ್ಲ. ಅರಣ್ಯ ಕಾಯುವ ನಮಗೆ ಸಿಗುವ ವೇತನವೇ ಕಡಿಮೆ. ಹೀಗಿರುವಾಗ ಆ ಹಣವನ್ನೂ ಸರಿಯಾದ ಸಮಯಕ್ಕೆ ಕೊಡದಿದ್ದರೆ ಹೇಗೆ?" ಎನ್ನುತ್ತಾರೆ ಕರ್ನಾಟಕ ಅರಣ್ಯ ದಿನಕೂಲಿ ನೌಕರರ ಸಂಘ ರಾಜ್ಯಾಧ್ಯಕ್ಷ ಎ. ಎಂ. ನಾಗರಾಜು.
"300 ಜನ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರಕಾರದಿಂದ ಹಣ ಬಿಡುಗಡೆ ಆಗುವುದು ತಡವಾದ ಕಾರಣದಿಂದ ಇವರಿಗೆ ಸಂಬಳ ಆಗಿಲ್ಲ. ಪಿಎಸ್‌ಎಂಎಸ್ ಸಿಸ್ಟಂನ ತಾಂತ್ರಿಕ ತೊಂದರೆ ಇದಕ್ಕೆ ಕಾರಣ. ವಾರದಲ್ಲಿ ಸಂಬಳ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು" ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಡಿ. ಮಹೇಶ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications