ವಿಡಿಯೋ; ಪ್ರೇಮ ವಿವಾಹವಾದ ಮಗಳು, ಜುಟ್ಟು ಹಿಡಿದು ಎಳೆದಾಡಿದ ತಂದೆ!
ಮೈಸೂರು, ಡಿಸೆಂಬರ್ 21; ಪ್ರೀತಿಸಿ ವಿವಾಹವಾದ ಮಗಳ ಜುಟ್ಟುಹಿಡಿದು ಎಳೆದಾಡಿದ ಅಪ್ಪ. ಅಪ್ಪನ ವಿರುದ್ದವೇ ದೂರು ಕೊಟ್ಟ ಮಗಳು. ಮಗಳ ತಾಳಿ ಕಿತ್ತೆಸೆದ ಅಪ್ಪ, ಇದು ಸಿನಿಮಾದಲ್ಲಿ ಕಥೆಯಲ್ಲ, ಮೈಸೂರಿನಲ್ಲಿ ನಡೆದ ನೈಜ ಘಟನೆ.
ಇಂತಹ ಮನ ಮಿಡಿಯುವ ಘಟನೆ ನಡೆದಿದ್ದು ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ. ತಾಲೂಕಿನ ಹರತಲೆ ಗ್ರಾಮದ ಚೈತ್ರಾ, ಹಲ್ಲರೆ ಗ್ರಾಮದ ಮಹೇಂದ್ರ ಎಂಬಾತನನ್ನ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಚೈತ್ರಾಳ ತಂದೆ ವಿಲನ್ ಆಗಿದ್ದರು.
ಅಪ್ಪನ ವಿರೋಧವನ್ನು ಲೆಕ್ಕಿಸದ ಚೈತ್ರಾ ಡಿಸೆಂಬರ್ 8ರಂದು ತಾನು ಪ್ರೀತಿಸುತ್ತಿದ್ದ ಮಹೇಂದ್ರನ ಜೊತೆ ಮದುವೆಯಾಗಿದ್ದರು. ನಂತರ ವಿವಾಹ ನೋಂದಣಿ ಮಾಡಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ಆಗ ಅಲ್ಲಿ ಹೈಡ್ರಾಮ ನಡೆದಿದೆ.

ವಿವಾಹ ನೋಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಚೈತ್ರಾಳ ತಂದೆ ಬಸವರಾಜ ನಾಯ್ಕ ಕಚೇರಿ ಎದುರು ಪ್ರತ್ಯಕ್ಷವಾಗಿದ್ದಾರೆ. ತಮ್ಮ ವಿರೋಧದ ನಡುವೆಯೂ ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾದ ಮಗಳನ್ನು ಕಂಡು ಕೆಂಡಾಮಂಡಲಗೊಂಡಿದ್ದಾರೆ.
ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಹಾಕಿ, ಜುಟ್ಟು ಹಿಡಿದು ಎಳೆದಾಡುತ್ತಾ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದರೆ ತಂದೆಗೆ ಡೋಂಟ್ ಕೇರ್ ಎಂದ ಮಗಳು ಸಾರ್ವಜನಿಕರ ನೆರವಿನೊಂದಿಗೆ ಅಪ್ಪನಿಂದ ತಪ್ಪಿಸಿಕೊಂಡು ಪ್ರಿಯತಮನನ್ನು ಸೇರಿಕೊಂಡಿದ್ದಾಳೆ.
ಅಲ್ಲದೇ ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕೆಂದು ಸಾರ್ವಜನಿಕವಾಗೇ ಅವಲತ್ತುಕೊಂಡಿದ್ದಾಳೆ. ತಮ್ಮ ಮದುವೆಗೆ ಪೋಷಕರ ವಿರೋಧವಿದೆ, ಈ ಮಧ್ಯೆ ಬೆದರಿಕೆಯೂ ಇದೆ ಎಂದು ಪ್ರಿಯತಮನನ್ನ ತಬ್ಬಿಹಿಡಿದು ಆತಂಕ ವ್ಯಕ್ತಪಡಿಸಿದ ಚೈತ್ರಾ ತನ್ನ ತಂದೆಯಿಂದ ತನಗೆ ರಕ್ಷಣೆ ಬೇಕೆಂದು ನಂಜನಗೂಡು ಪೊಲೀಸ್ ಠಾಣೆಗೆ ದೂರನ್ನೂ ಸಹ ನೀಡಿದ್ದಾಳೆ.












Click it and Unblock the Notifications