Mysuru Dasara: ರಿಲ್ಯಾಕ್ಸ್ ಮೂಡಿಗೆ ಜಾರಿದ ಜಂಬೂ ಸವಾರಿ ಗಜಪಡೆ
ಅದ್ದೂರಿಯಾಗಿ ಮೈಸೂರು ದಸರಾ ಜಂಬೂಸವಾರಿ ಸಂಪನ್ನವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ನಾನಾ ತಾಲೀಮಿನಲ್ಲಿ ನಿರತವಾಗಿ ಜಂಬೂಸವಾರಿ ಯಶಸ್ವಿಗೊಳಿಸಿದ ಗಜಪಡೆ ಭಾನುವಾರ ರಿಲ್ಯಾಕ್ಸ್ ಮೂಡಿಗೆ ಜಾರಿವೆ. ಅಭಿಮನ್ಯು ಐದನೆ ಬಾರಿ ಅಂಬಾರಿ ಹೊತ್ತು ಯಶಸ್ವಿಯಾಗಿ ಬನ್ನಿಮಂಟಪ ತಲುಪಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹಿಡಿದು ಮಾವುತರು ಹಾಗೂ ಕಾವಾಡಿಗರು ಸಂಭ್ರಮದಲ್ಲಿದ್ದಾರೆ.
ಅಭಿಮನ್ಯು ಮಾವುತ ವಸಂತ ಯುದ್ಧ ಗೆದ್ದ ಸಂಭ್ರಮದಲ್ಲಿದ್ದಾರೆ. ಅಲ್ಲದೆ, ಇತರೆ ಆನೆಗಳು ಯಾವುದೇ ಸಮಸ್ಯೆ ಇಲ್ಲದೆ ಮೆರವಣಿಯಲ್ಲಿ ಸಾಗಿಬಂದವು. ಈ ಹಿನ್ನೆಲೆಯಲ್ಲಿ ಆನೆಗಳಿಗೆ ಮೀಸಲಾದ ಅರಮನೆ ಆವರಣದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿ ಸ್ನಾನ ಮಾಡಿಸಲಾಯಿತು.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಆನೆಗಳಾದ ಅಭಿಮನ್ಯು, ಭೀಮ, ಧನಂಜಯ, ಗೋಪಿ, ಪ್ರಶಾಂತ, ಹಿರಣ್ಯ, ಕಂಜನ್, ಸುಗ್ರೀವ, ಲಕ್ಷ್ನಿ ಇದೀಗ ರಿಲ್ಯಾಕ್ಸ್ ಮೂಡಿನಲ್ಲಿವೆ. ಶನಿವಾರ ದಸರಾ ಜಂಬೂ ಸವಾರಿ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆ ಇದೀಗ ಅರಮನೆ ಆವರಣದಲ್ಲಿ ದಣಿವಾರಿಸಿಕೊಳ್ಳುತ್ತಿವೆ.
ಭಾನುವಾರ ಆನೆಗಳಿಗೆ ಯಾವುದೇ ತಾಲೀಮು, ಕಸರತ್ತು ಇರಲಿಲ್ಲ. ಹಾಗಾಗಿ ಆನೆಗಳು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದವು. ಮಾವುತರು ಆನೆಗಳನ್ನು ತೊಳೆಯುತ್ತಿದ್ದರೆ, ನೀರಿನಲ್ಲಿ ಆಟವಾಡುತ್ತಾ ಆನೆಗಳು ನಿರಾಳವಾಗಿದ್ದು ಕಂಡುಬಂದಿತು. ಇದೆ ಮೊದಲ ಬಾರಿಗೆ ಆಗಮಿಸಿದ್ದ ಏಕಲವ್ಯ ದಸರಾದಲ್ಲಿ ಭಾಗವಹಿಸಿ ಸಂಭ್ರಮಿಸಿದ. ಆದರೆ, ರೋಹಿತ, ದೊಡ್ಡಹರವೆ ಲಕ್ಷ್ಮಿಗೆ ಜಂಬೂಸವಾರಿಯಲ್ಲಿ ಭಾಗವಹಿಸಲು ಅವಕಾಶ ಸಿಗಲಿಲ್ಲ.
ಜಂಬೂಸವಾರಿ ಮುಗಿದ ಹಿನ್ನೆಲೆಯಲ್ಲಿ ದಸರಾ ಆನೆಗಳು ಅರಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರೆ ಜನರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಜಂಬೂಸವಾರಿ ಮುಗಿದ ಕಾರಣ ಮಾವುತರು ಹಾಗೂ ಕಾವಾಡಿಗರು ಯಾವುದೇ ಪ್ರತಿರೋಧ ತೋರಿಸದೆ ಫೋಟೋ ತೆಗೆಸಿಕೊಳ್ಳಲು ಸಹಕರಿಸಿದವು.
50 ದಿನ ಆನೆಗಳಿಗೆ ಉತ್ತಮ ತರಬೇತಿ, ತಾಲೀಮು ಕೊಟ್ಟು ಮಾವುತರು ಹಾಗೂ ಕಾವಾಡಿಗರು ಈ ಬಾರಿಯ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ್ದಾರೆ. ಹಾಗಾಗಿ ಅಕ್ಟೋಬರ್ 14ರಂದು ಗಜಪಡೆಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಇಷ್ಟು ದಿನ ಅರಮನೆಯಲ್ಲಿದ್ದ ಆನೆಗಳಿಗೆ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಸ್ವ-ಸ್ಥಳಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆದ ಕಾರಣ ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗಿದೆ. ಶನಿವಾರ ನಡೆದ ಜಂಬೂ ಸವಾರಿ ವೀಕ್ಷಿಸಲು ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾದ್ದರು. ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಕಂಡು ಜನ ಸಂಭ್ರಮಿಸಿದರು.












Click it and Unblock the Notifications