ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತ! ವರುಣಾದಿಂದ ಕಣಕ್ಕಿಳಿಯುವುದಾಗಿ ಹೇಳಿದ ಯತೀಂದ್ರ ಸಿದ್ದರಾಮಯ್ಯ
ಭಾರಿ ಕುತೂಹಲಕ್ಕೆ ಕಾರಣವಾಗಿರುವ ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಹೇಗೆಂದರೆ ಮುಂದೆ ಓದಿ.
ಮೈಸೂರು, ಫೆಬ್ರವರಿ. 09: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಭಾರಿ ಕುತೂಹಲಕ್ಕೆ ಕಾರಣವಾಗಿರುವುದು ಕೋಲಾರ ವಿಧಾನಸಭಾ ಕ್ಷೇತ್ರ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾಗಿನಿಂದ ಈ ಕ್ಷೇತ್ರದ ಬಗ್ಗೆ ಹಲವು ವದಂತಿಗಳು ಹರಡುತ್ತಿವೆ. ಇದಕ್ಕೆಲ್ಲಾ ಇತ್ಯರ್ಥ ಹಾಡುವಂತೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ತಾವೇ ಕಣಕ್ಕೆ ಇಳಿಯುವುದಾಗಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ, "ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ. ಹಾಗಾಗಿ ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ" ಎಂದು ಹೇಳಿದ್ದಾರೆ.

ನಮ್ಮ ತಂದೆಯವರು ಈಗಾಗಲೇ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಅವರು ಅಲ್ಲಿಂದ ಸ್ಪರ್ಧೆ ಮಾಡುವುದು ಖಚಿತ. ಹೀಗಾಗಿ ವರುಣಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಒಪ್ಪಿಗೆ ನೀಡಿದರೇ ಕೋಲಾರದಿಂದ ಕಣಕ್ಕೆ ಇಳಿಯುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇದೆಲ್ಲಾ ನಾಟಕ, ಸಿದ್ದರಾಮಯ್ಯ ಹಳೇ ಮೈಸೂರು ಭಾಗದಿಂದ ಸ್ಪರ್ಧೆ ಮಾಡುತ್ತಾರೆ. ಕೋಲಾರ ಅಂತ ಸುಮ್ಮನೆ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.

ಆದರೂ, ಜೆಡಿಎಸ್, ಬಿಜೆಪಿ ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪದೇ ಪದೇ ಕೋಲಾರಕ್ಕೆ ಭೇಟಿ ನೀಡಿ ಹಲವು ತಂತ್ರಗಳನ್ನು ಹೆಣೆಯುತ್ತಿವೆ. ಅಲ್ಲಿನ ನಾಯಕರನ್ನು ತಮ್ಮ ಕಡೆಗೆ ಸೆಲೆಯುವ ಪ್ರಯತ್ನ ಮಾಡುತ್ತಿವೆ. ಕುರುಬ ಸಂಘದಲ್ಲಿರುವ ಭಿನ್ನಾಭಿಪ್ರಾಯವನ್ನು ತಮಗೆ ಲಾಭವಾಗುವಂತೆ ಬಳಸಿಕೊಳ್ಳಲು ಎರಡು ಪಕ್ಷಗಳು ತಯಾರಿ ನಡೆಸಿವೆ.












Click it and Unblock the Notifications