ತಿ.ನರಸೀಪುರದಲ್ಲಿ ಕುಂಭ ಮೇಳ:ಪ್ರಸಾದ ಪರೀಕ್ಷೆಗೆ ಮುಂದಾದ ಆರೋಗ್ಯ ಇಲಾಖೆ
ಮೈಸೂರು, ಫೆಬ್ರವರಿ 13: ಜಿಲ್ಲೆಯ ತಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 17 ರಿಂದ ಮೂರು ದಿನಗಳು ನಡೆಯುವ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆಯವರು, ಪ್ರಸಾದ ವಿನಿಮಯ ಮಾಡುವವರು ತಹಶೀಲ್ದಾರರ ಅನುಮತಿ ಪಡೆದು ಪ್ರಸಾದ ಹಂಚುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜು ಖಡಕ್ ಆದೇಶ ನೀಡಿದ್ದಾರೆ.
ಈಗಾಗಲೇ ವಿಷ ಪ್ರಸಾದದ ಪ್ರಕರಣದ ಬಳಿಕ ಇಲ್ಲಿಯೂ ಕೂಡ ಆಹಾರ ಗುಣಮಟ್ಟ ಪರಿಶೀಲನೆಗೆ ಹಾಗೂ ಕಲಬೆರಕೆ ಆಹಾರ ಪತ್ತೆಹಚ್ಚಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಸಣ್ಣ ತೊಂದರೆಗಳು ಆಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇನ್ನು ಕುಂಭಮೇಳದಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಡಾ. ಬಿ. ಬಸವರಾಜು ತಿಳಿಸಿದ್ದಾರೆ. ಅಗಸ್ತೇಶ್ವರ ದೇವಾಲಯದ ಸಮೀಪವಿರುವ ಕಲ್ಲಿನ ಮಂಟಪದಲ್ಲೇ ಒಂದು ಆಸ್ಪತ್ರೆ ಮತ್ತು ಮತ್ತೊಂದು ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಹತ್ತಿರ, ಒಟ್ಟು ಎರಡು ತಾತ್ಕಾಲಿಕ ಆಸ್ಪತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಅದಕ್ಕಾಗಿಯೇ ಬೇಕಾಗುವ ಔಷಧಿಗಳನ್ನು ಈಗಾಗಲೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೇ ತಿ. ನರಸೀಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 20 ಹಾಸಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
"ಮೈಸೂರಿನ ಕೆ.ಆರ್ ಆಸ್ಪತ್ರೆಯಿಂದ ಫಿಜಿಷಿಯನ್, ಸರ್ಜನ್, ಆರ್ಥೋಪಿಡಿಶಿಯನ್ ಮತ್ತು ಮಕ್ಕಳ ತಜ್ಞ ವೈದ್ಯರನ್ನು ನಿಯೋಜಿಸುವಂತೆ ಕೇಳಿಕೊಂಡಿದ್ದೇವೆ. ಕುಂಭ ಮೇಳ ನಡೆಯುವ ಮೂರು ದಿನಗಳ ಕಾಲ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲು ವೈದ್ಯರು ಮತ್ತು ಶುಶ್ರೂಷಕರನ್ನು ನಿಯೋಜನೆ ಮಾಡಲಾಗಿದೆ. ಎರಡೂ ಆಸ್ಪತ್ರೆಗಳಿಗೆ ಒಟ್ಟು 4 ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ" ಎಂದು ಡಾ. ಬಸವರಾಜು ತಿಳಿಸಿದ್ದಾರೆ.












Click it and Unblock the Notifications