ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ: ಮೈಸೂರು ಜಿಲ್ಲಾಧಿಕಾರಿ
ಮೈಸೂರು, ಆಗಸ್ಟ್ 7: ಕಾವೇರಿ, ಕಬಿನಿ ಮತ್ತು ಲಕ್ಷ್ಮಣ ತೀರ್ಥ ನದಿ ಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮೈಸೂರು ಜಿಲ್ಲಾಡಳಿತವು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿದ್ದು, ನಾಗರೀಕರು ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಗುರುವಾರ ಹುಣಸೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಹುಣಸೂರು ತಾಲೂಕು ಆಡಳಿತ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆ ನಡೆಸಿದರು. ಜಿಲ್ಲಾಡಳಿತಕ್ಕೆ 6 ರಿಂದ 10 ಗಂಟೆಗಳ ಮುಂಚಿತವಾಗಿ ಪ್ರವಾಹದ ಮುನ್ಸೂಚನೆ ದೊರೆತರೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸನ್ನದ್ಧವಾಗಿದೆ ಎಂದರು.
ತುಂಬಿ ಹರಿದ ಕಬಿನಿ; ನಂಜನಗೂಡಿನ ಸುತ್ತೂರು ಸೇತುವೆ ಮುಳುಗಡೆ
ಇದೇ ವೇಳೆ ಬೈಲುಕುಪ್ಪೆಯಲ್ಲಿ ಕಾವೇರಿ ನದಿ ಪ್ರವಾಹ ಹಿನ್ನೆಲೆಯಲ್ಲಿ ಕೊಪ್ಪ ಗ್ರಾಮದ ಮಸೀದಿ ರೋಡ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿರುವುದನ್ನು ವೀಕ್ಷಿಸಿದರು.
ಪ್ರವಾಹ ಪೀಡಿತ ಪ್ರದೇಶದಲ್ಲಿ ಇನ್ನೂ ವಾಸವಿರುವ ಜನರನ್ನು ಸಂಪರ್ಕಿಸಿ ಕೂಡಲೇ ಸ್ಥಳಾಂತರಿಸಲು ತಹಶೀಲ್ದಾರ ಶ್ವೇತಾ ರವೀಂದ್ರ ಅವರಿಗೆ ಸೂಚಿಸಿದರು. ಈ ಸಂದರ್ಭ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.