ನದಿಗಿಳಿದು ನಾಪತ್ತೆಯಾಗಿದ್ದ ಪೂಜಾರಿ 24 ಗಂಟೆಗಳ ಬಳಿಕ ಪ್ರತ್ಯಕ್ಷ
ನಂಜನಗೂಡು, ಆಗಸ್ಟ್ 13: ಪ್ರವಾಹದಲ್ಲಿ ಈಜಿ ಸಾಹಸ ಮಾಡುವೆ ಎಂದು ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಕಬಿನಿ ನದಿಗೆ ಧುಮುಕಿ ನಾಪತ್ತೆಯಾಗಿದ್ದ ಪೂಜಾರಿ ವೆಂಕಟೇಶ್ ಆಶ್ಚರ್ಯಕರ ರೀತಿಯಲ್ಲಿ ಬದುಕಿ ದಡ ಸೇರಿದ್ದಾರೆ.
24 ಗಂಟೆಗಳ ಕಾಲ ಪ್ರವಾಹದ ನಡುವೆಯೇ ಇದ್ದು, ಸೋಮವಾರ ಈಜಿಕೊಂಡು ದಡ ಮುಟ್ಟಿದ್ದಾರೆ. ನಂಜನಗೂಡು ಲಿಂಗ ಭಟ್ಟರ ಗುಡಿಯ ಪೂಜಾರಿಯಾಗಿದ್ದ ವೆಂಕಟೇಶ್ ಭಾನುವಾರ ನಾಲ್ಕೈದು ಮಂದಿ ಸ್ನೇಹಿತರೊಂದಿಗೆ ಹೆಜ್ಜಿಗೆ ಸೇತುವೆ ಬಳಿ ಹೋಗಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜುವುದಾಗಿ ಸವಾಲೆಸೆದಿದ್ದರು.
ತಾನು ಈಜುವುದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡುವಂತೆ ಸ್ನೇಹಿತರಿಗೆ ತಿಳಿಸಿ ನದಿಗೆ ಧುಮುಕಿದ್ದರು. ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಲೀಲಾಜಾಲವಾಗಿ ಈಜುತ್ತಿದ್ದ ವೆಂಕಟೇಶ್ ಕೆಲ ಹೊತ್ತಿನ ಬಳಿಕ ಕಂಡಿರಲಿಲ್ಲ. ಮತ್ತೆ ಮೇಲೆದ್ದು ಸ್ವಲ್ಪ ದೂರದಲ್ಲಿ ಕಾಣಿಸಿಕೊಂಡು ಮತ್ತೆ ನಾಪತ್ತೆಯಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಬಿತ್ತರವಾದ ಬಳಿಕ ವೆಂಕಟೇಶ್ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ವೆಂಕಟೇಶ್ ಕೊಚ್ಚಿ ಹೋಗಿದ್ದಾರೆ ಎಂದೇ ಸ್ನೇಹಿತರು ತಿಳಿದಿದ್ದರು. ಆದರೆ ಸೋಮವಾರ ನೀರಿನ ಸೆಳೆತ ಕಡಿಮೆಯಾಗಿದ್ದು, ಇವರು ಈಜಿಕೊಂಡು ಮತ್ತೆ ದಡಕ್ಕೆ ಬಂದಿದ್ದಾರೆ.

ಹೆಜ್ಜಿಗೆ ಸೇತುವೆ ಕೆಳಭಾಗದಲ್ಲಿ ಇದ್ದ ಸಣ್ಣ ಜಾಗದಲ್ಲೇ ಹತ್ತಿಕೊಂಡು ರಾತ್ರಿಯಿಡೀ ಕಳೆದಿದ್ದಾರೆ. ರಾತ್ರಿಯಿಡೀ ಚಳಿ, ಜ್ವರದ ನಡುವೆ ಕಾದು ಕುಳಿತಿದ್ದಾರೆ. ಸೋಮವಾರ ನೀರು ಕಡಿಮೆಯಾದ್ದರಿಂದ ದಡಕ್ಕೆ ಬಂದು ಜನರನ್ನು ಕೂಗಿಕೊಂಡಿದ್ದು, ಅಲ್ಲೇ ಇದ್ದ ಜನ ಇವರನ್ನು ರಕ್ಷಿಸಿದ್ದಾರೆ.












Click it and Unblock the Notifications