ಮೈಸೂರು ಅರಮನೆಯಲ್ಲಿ ಮರುಕಳಿಸಿದ ರಾಜವೈಭವ
ಮೈಸೂರು, ಅಕ್ಟೋಬರ್ 10; ಮೈಸೂರು ರಾಜರು ನಡೆಸಿಕೊಂಡು ಬರುತ್ತಿದ್ದ ರಾಜದರ್ಬಾರ್ ಮೈಸೂರು ಅರಮನೆಯಲ್ಲಿ ಮರುಕಳಿಸುವುದರೊಂದಿಗೆ ಅಂದಿನ ರಾಜವೈಭವವನ್ನು ತೆರೆದಿಡುತ್ತಿದೆ. ಮೈಸೂರು ಮಹಾರಾಜರ ಕಾಲದಿಂದಲೂ ರಾಜ ದರ್ಬಾರಿಗೂ ದಸರಾ ಆಚರಣೆಗೂ ಅವಿನಾಭಾವ ಸಂಬಂಧವಿದೆ. ದಸರಾ ಹಬ್ಬದ ಕಾರ್ಯಕ್ರಮಗಳು ದರ್ಬಾರಿನಲ್ಲಿಯೇ ನಡೆಯುತ್ತಿದ್ದದ್ದು ಇತಿಹಾಸ. ದಸರಾ ಸಂದರ್ಭ ವಿವಿಧ ಪಾಂಡಿತ್ಯ ಹೊಂದಿದವರನ್ನು ರಾಜರು ಗುರುತಿಸಿ ಸನ್ಮಾನಿಸುತ್ತಿದ್ದದ್ದೇ ರಾಜ ದರ್ಬಾರಿನಲ್ಲಾಗಿತ್ತು.
ಬಹುಶಃ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಈ ದೇಶದಲ್ಲಿ ಸುದೀರ್ಘ ಕಾಲದವರೆಗೆ ಅಂದರೆ ಸುಮಾರು 550 ವರ್ಷಗಳ ಕಾಲ ಆಡಳಿತ ನಡೆಸಿದ ರಾಜಕುಟುಂಬಗಳು ಕಾಣಿಸುವುದಿಲ್ಲ. ಆದರೆ ಆ ಹೆಮ್ಮೆ ಮೈಸೂರು ರಾಜವಂಶಕ್ಕೆ ಸಲ್ಲುತ್ತದೆ. ಮೈಸೂರು ಮಹಾರಾಜರು ಆಡಳಿತಗಾರರು, ಕಲೆ ಸಾಹಿತ್ಯ, ಸಂಸ್ಕೃತಿಯ ಪೋಷಕರು ಎಂಬುದಕ್ಕೆ ಇವತ್ತು ನಾವು ನಾಡಹಬ್ಬವಾಗಿ ಆಚರಿಸಿಕೊಂಡು ಬರುತ್ತಿರುವ ದಸರಾ ಹಬ್ಬವೇ ಸಾಕ್ಷಿಯಾಗಿದೆ. ದಸರಾ ಪ್ರಮುಖ ಆಕರ್ಷಣೆಯಲ್ಲಿ ರಾಜದರ್ಬಾರು ಪ್ರಮುಖವಾಗಿದ್ದು, ಇವತ್ತು ಅದು ಸಂಪ್ರದಾಯವಾಗಿ ಆಚರಿಸಿಕೊಂಡು ಮುಂದೆ ಸಾಗುತ್ತಿದೆ.
ಸ್ವಾತಂತ್ರ್ಯ ನಂತರದ ಹಲವು ವಿದ್ಯಮಾನಗಳ ನಂತರ ಖಾಸಗಿಯಾಗಿ ಅರಮನೆಗಷ್ಟೆ ಸೀಮಿತವಾಗಿ ನಡೆಯುತ್ತಿರುವ ದರ್ಬಾರ್‌ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಹೀಗಾಗಿ ಇದು ಅರ್ಥಾತ್ ಖಾಸಗಿ ದರ್ಬಾರ್ ಆಗಿ ಮುನ್ನಡೆಯುತ್ತಿದೆ. ಇದೀಗ ಮೈಸೂರು ಅರಮನೆಯಲ್ಲಿ ಅಕ್ಟೋಬರ್ 7ರಿಂದ ಆರಂಭವಾಗಿರುವ ಖಾಸಗಿ ದರ್ಬಾರ್ ಅಕ್ಟೋಬರ್ 14ರವರೆಗೆ ನಡೆಯಲಿದೆ. ಆರಂಭದ ದಿನ ಬೆಳಗ್ಗೆ ಹಲವು ವಿಧಿ ವಿಧಾನಗಳೊಂದಿಗೆ ಆರಂಭವಾಗಿರುವ ದರ್ಬಾರ್ ನಂತರ ಸಂಜೆ ನಡೆಯುತ್ತದೆ. ಇದೀಗ ಪ್ರತಿದಿನ ಸಂಜೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ.

ಯದುವೀರ್ ಸಿಂಹಾಸನಾರೋಹಣಕ್ಕೆ ಬಹುಪರಾಕ್
ಯದುವೀರ್ ಸಿಂಹಾಸನಾರೋಹಣಕ್ಕೆ ಆಗಮಿಸುತ್ತಿದ್ದಂತೆಯೇ ಹೊಗಳು ಭಟ್ಟರ ಜಯಘೋಷ, ಸೇವಕರಿಂದ ಉಡಾಸ್ ಸೇವೆ, ಮಂಗಳವಾದ್ಯದ ಮೊಳಗಿಸುತ್ತಾರೆ. ರಾಜಭಟರು ರಾಜಾಧಿರಾಜ, ರಾಜ ಮಾರ್ತಾಂಡ, ಸಾರ್ವಭೌಮ, ಯದುಕುಲತಿಲಕ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಹುಪರಾಕ್, ಬಹುಪರಾಕ್, ಬಹುಪರಾಕ್ ಎಂದು ಜಯಘೋಷ ಪ್ರತಿಧ್ವನಿಸುತ್ತದೆ.
ನಂತರ ದರ್ಬಾರ್ ಸಭಾಂಗಣ ಪ್ರವೇಶಿಸಿದ ಯದುವೀರ್ ಕೆಲಕಾಲ ಸಿಂಹಾಸನಾರೋಹಣ ಮಾಡುತ್ತಾರೆ. ಅರಮನೆಯ ಆಸ್ಥಾನ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನ ಖಚಿತ ಸಿಂಹಾಸನಕ್ಕೆ ನಿಯಮದ ಅನ್ವಯ ಪೂಜೆ ಸಲ್ಲಿಸುತ್ತಾರೆ. ದರ್ಬಾರ್ ಹಾಲ್‌ನಲ್ಲಿ ಆಯೋಜಿಸಿದ್ದ ನವಗ್ರಹ ಪೂಜೆ, ಸಿಂಹಾಸನದ ಮುಂದೆ ಇರಿಸಿದ್ದ ಸಿಂಹದ ಮುಖ ಮತ್ತು ಕಳಶಕ್ಕೆ ಅಕ್ಷತೆ, ಕುಂಕುಮ, ಅರಿಶಿಣ, ಹೂ ಹಾಕಿ ಗಂಧದ ಕಡ್ಡಿ ಹಾಗೂ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಿ, ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸಿಂಹಾಸನಾರೋಹಣ ಮಾಡುವುದು ಪ್ರತಿದಿನವೂ ನಡೆಯುತ್ತದೆ.

ಆಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್
ರಾಜಗಾಂಭೀರ್ಯದಿಂದ ರತ್ನಸಿಂಹಾಸನ ಏರಿ ಆಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್ ಮಾಡಿ ಗತ್ತಿನಿಂದ ಕೂತು ದರ್ಬಾರ್ ಆರಂಭಿಸುವುದು ಸಂಪ್ರದಾಯ. ಈ ವೇಳೆ ಕರ್ನಾಟಕ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಕಾಯೋ ಶ್ರೀ ಗೌರಿ ಗೀತೆಯನ್ನು ನುಡಿಸಿ ಗೌರವ ಸಲ್ಲಿಸಲಾಗುತ್ತದೆ. ಅಲ್ಲದೆ ಶ್ರೀ ಮಹಾಗಣಪತಿಂ, ಸರಸ್ವತಿ ಭಗವತಿಂ, ಸರಸ್ವತಿ, ಬ್ರಹ್ಮಮುರಾರಿ, ಐಗಿರಿ ನಂದಿನಿ, ವಿಜಯಾಂಬಿಕೆ, ಶ್ರೀ ಚಾಮುಂಡೇಶ್ವರಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡುಗಳನ್ನು ನುಡಿಸಲಾಗುತ್ತದೆ.
ಈ ವೇಳೆ ರಾಜಾಧಿರಾಜ, ರಾಜ ಮಾರ್ತಾಂಡ, ಶ್ರೀಮನ್ಮಹಾರಾಜ, ಬಹುಪರಾಕ್ ಜಯಘೋಷಗಳು ಮೊಳಗುತ್ತವೆ. ಸುಮಾರು ಅರ್ಧ ಗಂಟೆ ಕಾಲ ಸಿಂಹಾಸನದಲ್ಲಿ ಕುಳಿತ ಯದುವೀರ್ ಚಾಮುಂಡಿಬೆಟ್ಟ, ಪರಕಾಲಮಠ, ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಸೇರಿದಂತೆ ವಿವಿಧ ದೇವಾಲಯಗಳಿಂದ ತಂದಿದ್ದ ಪೂರ್ಣಫಲ ಪ್ರಸಾದವನ್ನು ಸ್ವೀಕರಿಸುತ್ತಾರೆ. ಅಲ್ಲದೇ ಗಂಗೆಯ ಸಂಪ್ರೋಕ್ಷಣೆ ಆದ ಬಳಿಕ ದರ್ಬಾರ್‌ಗೆ ಸಹಕಾರ ನೀಡಿದವರಿಗೆ ಯದುವೀರ್, ಕಿರುಕಾಣಿಕೆ ನೀಡಿ ಗೌರವ ಸಲ್ಲಿಸಿ ಸಿಂಹಾನಸದಿಂದ ಇಳಿಯುತ್ತಾರೆ.

ಆರಂಭದ ದಿನ ಹತ್ತು ಹಲವು ವಿಧಿವಿಧಾನಗಳು
ದರ್ಬಾರ್ ಆರಂಭದ ದಿನ ಬೆಳಗ್ಗೆ 6 ರಿಂದ 6.12ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಸಿಂಹವನ್ನು ಜೋಡಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ, ನಂತರ ಯದುವೀರ್ ಅವರಿಗೆ ಬೆಳಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿಸಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳಸ್ನಾನ ಮಾಡಿಸಲಾಗುತ್ತದೆ. ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಆರತಿ ಬೆಳಗುತ್ತಾರೆ. ಆನಂತರ ಯದುವೀರ್ ಪೂಜೆಗೆ ಅಣಿಯಾಗುತ್ತಾರೆ.
ಮೊದಲಿಗೆ ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿದರು. ಬಳಿಕ ಚಾಮುಂಡಿ ತೊಟ್ಟಿಯಲ್ಲಿ ಕೂರಿಸಿ ಕಂಕಣ ಧಾರಣೆ ಮಾಡಲಾಗುತ್ತದೆ. ಮತ್ತೊಂದೆಡೆ ತ್ರಿಷಿಕಾ ಅವರೂ ವಾಣಿ ವಿಲಾಸ ದೇವರಮನೆಯಲ್ಲಿ ಕಂಕಣ ಧಾರಣೆ ಮಾಡಿಕೊಳ್ಳುತ್ತಾರೆ. ನಂತರ ಚಾಮುಂಡೇಶ್ವರಿ ಮತ್ತು ಗಣಪತಿಯನ್ನು ಪೂಜಿಸಿ ಬಳಿಕ ಅರಮನೆಯ ಸಾವರ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸವನ್ನು ಕರೆತಂದು ಯದುವೀರ್ ಪೂಜೆ ಸಲ್ಲಿಸುತ್ತಾರೆ.

ಅವತ್ತಿನ ಕಾಲದಂತೆಯೇ ನಡೆಯುವ ದರ್ಬಾರ್
ಖಾಸಗಿ ದರ್ಬಾರ್ ಬಳಿಕ ಚಾಮುಂಡೇಶ್ವರಿ ದೇವಿಯ ವಿಗ್ರಹದೊಂದಿಗೆ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಉತ್ಸವ ಹಿಂದಿರುಗುತ್ತದೆ. ಖಾಸಗಿ ದರ್ಬಾರ್ ಮುಗಿಸಿ ಅರಮನೆಗೆ ಹಿಂದಿರುಗಿದ ಯದುವೀರ್ ಅವರನ್ನು ಬೆಳ್ಳಿಯ ಆಸನದ ಮೇಲೆ ಕೂರಿಸಿ ಪಾದಪೂಜೆ ನೆರವೇರಿಸಲಾಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅವತ್ತಿನ ಕಾಲದಲ್ಲಿ ಹೇಗೆ ರಾಜರ ದರ್ಬಾರ್ ನಡೆಯುತ್ತಿತ್ತೋ ಅದೇ ರೀತಿ ಈಗಲೂ ನಡೆಯುತ್ತದೆ. ಇದೆಲ್ಲವೂ ಮೈಸೂರು ರಾಜವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ. ಜತೆಗೆ ಮೈಸೂರು ದಸರಾವನ್ನು ವಿಶ್ವವಿಖ್ಯಾತಿಯನ್ನಾಗಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications