ಎಚ್‌ಡಿಕೆ ಹೇಳಿದಂತೆ ಮೀಸಲಾತಿ; ಸರ್ಕಾರದ ವಿರುದ್ಧವೇ ಸಚಿವರ ಆರೋಪ!
ಮೈಸೂರು, ಜುಲೈ 04; "ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮೀಸಲಾತಿ ನಿಗದಿಯನ್ನು ಸರ್ಕಾರ ಮಾಡಬೇಕು. ಆದರೆ ಎಚ್. ಡಿ. ಕುಮಾರಸ್ವಾಮಿ ಹೇಳಿದಂತೆ ಮೀಸಲಾತಿ ಮಾಡಿದ್ದಾರೆ" ಎಂದು ತಮ್ಮದೇ ಸರ್ಕಾರದ ವಿರುದ್ದ ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ್ ಆರೋಪಿಸಿದರು.
ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ನಮಗಾಗುವ ಚಿತ್ರಹಿಂಸೆ ಯಾರಿಗೆ ಹೇಳೋದು?. ನಮ್ಮ ಸರ್ಕಾರ ಬಂದರೂ ನಮ್ಮ ಸರ್ಕಾರ ಇದೆ ಎಂಬ ಭಾವನೆ ನಮಗಿಲ್ಲ. ನಮ್ಮ ಸರ್ಕಾರದಲ್ಲಿ ವಿಪಕ್ಷದವರ ಕೈ ಮೇಲಾಗುತ್ತಿದೆ" ಎಂದರು.
"ಅನುಕೂಲ ಬಂದಂತೆ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಪಾಲನೆ ಆಗಿಲ್ಲ" ಎಂದು ಸಚಿವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದರು.

"ಸಿಎಂ ಹುದ್ದೆ ಅನ್ನೋದು ಅಂಬಾರಿ ಹೊರುವ ಆನೆ ಇದ್ದಂತೆ. ಸಂವೇದನ ಶೀಲ, ಆಲೋಚನೆಯುಳ್ಳ ತೂಕದ ಜೊತೆ ಆನೆ ಸೂಕ್ತ. ಸಿಎಂ ಹುದ್ದೆ ವೈಭವ, ಪ್ರೆಸ್ಟೀಜ್‌ಗೆ ಅಲ್ಲ. ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವಂತಿರಬೇಕು" ಎಂದರು.
"ಬದಲಾವಣೆ ಜಗದ ನಿಯಮ. ಅರ್ಜುನ, ಅಭಿಮನ್ಯು ಕೆಲ ವರ್ಷ ಅಂಬಾರಿ ಹೊತ್ತರು. ಅಪ್ಪ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿಸೋಕೆ ಆಗಲ್ಲ" ಎಂದು ಮಾರ್ಮಿಕವಾಗಿ ನುಡಿದರು.
"ಸಿದ್ದರಾಮಯ್ಯ ಪದೇ ಪದೇ 25 ಪರ್ಸೆಂಟ್ ಸರ್ಕಾರ ಅಂತಾರೆ. ವೈಯುಕ್ತಿಕವಾಗಿ ವಿಚಾರ ಇದ್ದರೆ ರುಜುವಾತು ಮಾಡಬೇಕು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮನ್ನೆಲ್ಲಾ ಒಟ್ಟೊಟ್ಟಿಗೆ ಸೇರಿಸಿ ಹೇಳಬಾರದು" ಎಂದು ಹೇಳಿದರು.
ಶ್ರೀರಾಮುಲು ಪಿಎ ವಿರುದ್ಧ ದೂರು ವಿಚಾರ ಕುರಿತು ಮಾತನಾಡಿದ ಅವರು, "ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ? ಕರೆದು ಹೇಳಬಹುದಿತ್ತು. ದೂರು ಕೊಡುವ ಅಗತ್ಯವಿರಲಿಲ್ಲ. ಶಾಸಕ ರಮೇಶ್ ಜಾರಕಿಹೊಳಿ ಷಡ್ಯಂತ್ರಕ್ಕೆ ಬಲಿ ಆಗಿರೋದು ನಿಜ. ಆದರೂ ಅವರಿಗೆ ನ್ಯಾಯ ಕೊಡುವಲ್ಲಿ ದುರುದ್ದೇಶದಿಂದ ವಿಳಂಬವಾಗುತ್ತಿದೆ" ಎಂದು ತಿಳಿಸಿದರು.
"ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲ. ನಮ್ಮ ಕ್ಷೇತ್ರಗಳಲ್ಲಿ ನಮಗಿಂತ ಬೇರೆ ಪಕ್ಷದವರ ಕೆಲಸವೇ ಜಾಸ್ತಿ ನಡೆಯುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications