Mysuru Dasra: 42.8 ಲೀಟರ್ ಹಾಲು ಕರೆದು 1 ಲಕ್ಷ ಬಹುಮಾನ ಗೆದ್ದ ಹಸುವಿನ ಮಾಲಿಕ
ಮೈಸೂರು ದಸರಾ ಮಹೋತ್ಸವ-2024 ರ ಅಂಗವಾಗಿ ರೈತ ದಸರಾ ಉಪ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಆನೇಕಲ್ ತಾಲೂಕಿನ ಹಸುವಿನ ಮಾಲೀಕರೊಬ್ಬರು ತಾವು ಸಾಕಿದ್ದ ಹಸುವಿನಿಂದ 42.8 ಲೀಟರ್ ಹಾಲು ಕರೆಯುವ ಮೂಲಕ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದರು.
ವಿವಿಧ ಕಡೆಗಳಿಂದ ಆಗಮಿಸಿದ್ದಂತಹ ಸ್ಪರ್ಧಿಗಳಿಗೆ ನೆರೆದಿದ್ದಂತಹ ಜನರು ಸಿಳ್ಳೆ, ಕೇಕೆ ಮತ್ತು ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಅವರು, ನಮ್ಮ ಸರ್ಕಾರ ಪ್ರಥಮ ಬಹುಮಾನಕ್ಕೆ ಒಂದು ಲಕ್ಷ, ದ್ವಿತೀಯ ಬಹುಮಾನಕ್ಕೆ 80 ಸಾವಿರ, ತೃತೀಯ ಬಹುಮಾನಕ್ಕೆ 60 ಸಾವಿರ ಹಾಗೂ ಕೊನೆಯ ಬಹುಮಾನಕ್ಕೆ 40 ಸಾವಿರ ರೂಪಾಯಿ ನೀಡಲು ತೀರ್ಮಾನಿಸಿದೆ ಎಂದರು.

ಮೈಸೂರು ಗ್ರಾಮಾಂತರ ಪ್ರದೇಶದ ಜನರು ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಇವರು ಕೃಷಿ ಜೊತೆಗೆ ಹೈನುಗಾರಿಕೆ ಮೇಲೆ ಹೆಚ್ಚಾಗಿ ಅವಲಂಬಿಸಿದ್ದು ಇನ್ನೂ ನಗರ ಪ್ರದೇಶದಲ್ಲಿ ಬರಿ ಹೈನುಗಾರಿಕೆ ಮಾಡುತ್ತಿದ್ದಾರೆ ಎಂದರು.
ಹೈನುಗಾರಿಕೆ ಜೊತೆಗೆ ಜೀವನ ಕ್ರಮವನ್ನು ಬದಲಾಯಿಸಿಕೊಳ್ಳಬೇಕು ಇವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಕೆಲವೊಂದು ಉಪ ಕಸುಬುಗಳನ್ನು ರೂಢಿಸಿಕೊಳ್ಳಬೇಕು ಎಂದರು.
ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ
ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ 8 ಹಸುಗಳು ಭಾಗವಹಿಸಿದ್ದು, ಒಟ್ಟು 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಬೆಳಿಗ್ಗೆ ಮತ್ತು ಸಂಜೆ ಅಂತಿಮ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಹೆಚ್ಚಿನ ಪ್ರಮಾಣದ ಹಾಲನ್ನು ಕರೆದ ಸ್ಪರ್ಧಿಗೆ ಪ್ರಶಸ್ತಿ ನೀಡಲಾಯಿತು.
ಆನೇಕಲ್ ತಾಲ್ಲೂಕಿನ ಕಗ್ಗಲೀಪುರದ ತನಿಷ್ ಫಾರಂ ಡೈರಿಯ ರಾಮಚಂದ್ರ ರೆಡ್ಡಿ - ಬೆಳಗ್ಗೆ ಮತ್ತು ಸಂಜೆ ಸೇರಿ ಒಟ್ಟು 42.840 ಲೀಟರ್ ಹಾಲು ಕರೆಯುವ ಮೂಲಕ ಪ್ರಥಮ ಸ್ಥಾನ ಪಡೆದು, 1 ಲಕ್ಷ ರೂಪಾಯಿ ಬಹುಮಾನ ಪಡೆದರು.
ಚನ್ನರಾಯಪಟ್ಟಣ ತಾಲ್ಲೂಕಿನ ತೋಟಿ ಗ್ರಾಮದ ಬಾಬು ಅವರು ಬೆಳಗ್ಗೆ ಮತ್ತು ಸಂಜೆ ಒಟ್ಟಾರೆ 42.300 ಲೀಟರ್ ಹಾಲು ಕರೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿ 80 ಸಾವಿರ ರೂಪಾಯಿ ಬಹುಮಾನ ಪಡೆದರು.
ಆನೇಕಲ್ ತಾಲ್ಲೂಕಿನ ವೆಟ್ ಫಾರಂನ ಅಜಯ್.ಪಿ ರೆಡ್ಡಿ ಅವರ ಮಾಲೀಕತ್ವದ ಹಸು ಬೆಳಗ್ಗೆ ಮತ್ತು ಸಂಜೆ ಎರಡೂ ಒಟ್ಟಾರೆ 41.300 ಲೀಟರ್ ಕರೆಯುವ ಮೂಲಕ ತೃತೀಯ ಸ್ಥಾನ ಗಳಿಸಿ 60 ಸಾವಿರ ಬಹುಮಾನ ಪಡೆದುಕೊಂಡಿತು.
ಎಚ್ ಡಿ ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ ಎಜಿಎಂ ಡೈರಿ ಫಾರಂ ದೇವರಾಜ್ ಅವರ ಹಸು ಒಟ್ಟು 40.580 ಲೀ ಕರೆದು ನಾಲ್ಕನೇ ಸ್ಥಾನ ಪಡೆದುಕೊಂಡು 40 ಸಾವಿರ ನಗದು ಹಣ ಗಳಿಸಿತು.












Click it and Unblock the Notifications