ಕೋರ್ಟ್ ಅಂಗಳ ಪ್ರವೇಶಿಸಿದ ಮಹಿಷ ದಸರಾ ವಿವಾದ: ಸಮಿತಿಗೆ ನೋಟಿಸ್
ಮೈಸೂರು, ಅಕ್ಟೋಬರ್ 08: ಮಹಿಷ ದಸರಾ ಆಚರಣೆ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಇದೀಗ ಮಹಿಷ ದಸರಾ ಆಚರಣೆ ವಿರೋಧಿಸಿ ವ್ಯಕ್ತಿಯೊಬ್ಬರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರು ದಸರಾ ಹಿನ್ನೆಲೆಯಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ರಸ್ತೆಗಳ ಗುಂಡಿ ಮುಚ್ಚಿಸಲಾಗುತ್ತಿದೆ. ಅರಮನೆ ಕಟ್ಟಡಗ ಬಲ್ಬ್ ಗಳನ್ನು ಬದಲಾಯಿಸಲಾಗುತ್ತಿದೆ. ಸರ್ಕಾರಿ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯಲಾಗುತ್ತಿದೆ. ಆದರೆ, ಈ ನಡುವೆ ಮಹಿಷ ದಸರಾ ಹೆಚ್ಚು ಸದ್ದು ಮಾಡುತ್ತಿದೆ.

ಮಹಿಷ ದಸರಾ ಆಚರಣೆ ವಿರೋಧಿಸಿ ಮೈಸೂರಿನ 8ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸ್ನೇಹಮಹಿ ಕೃಷ್ಣ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ 11ಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸಿದೆ.
ಏನಿದು ವಿವಾದ..?
2015 ರಿಂದ ದಲಿತ ಪರ ಸಂಘಟನೆಗಳು, ಪ್ರಗತಿಪರರು ಮೈಸೂರಿನಲ್ಲಿ ಮಹಿಷ ದಸರಾ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಷ ದಸರಾಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ನೂತನ ಸರ್ಕಾರ ಬಂದ ಮೇಲೆ ಮತ್ತೆ ಮಹಿಷ ದಸರಾ ಆಚರಣೆ ಮುನ್ನಲೆಗೆ ಬಂದಿದೆ.
ಸಂಘರ್ಷಕ್ಕೂ ಸಿದ್ದ
ಇತ್ತ ಸಂಸದ ಪ್ರತಾಪಸಿಂಹ ಸೇರಿದಂತೆ ಇತರರು ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಘರ್ಷವಾದರೂ ನಾವು ಮಹಿಷ ದಸರಾ ನಡೆಯಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಇತ್ತ ಮಹಿಷ ಸಮಿತಿಯವರು ಇದು ದಸರಾ ಆಗಲಿ ಅಥವಾ ಚಾಮುಂಡೇಶ್ವರಿ ಗಾಗಲಿ ವಿರೋಧಿ ಮಾಡುತ್ತಿರುವುದ್ದಲ್ಲ. ಕೇವಲ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಪೋಸ್ಟರ್ ಬಿಡುಗಡೆ
2015ರಲ್ಲಿ ಆರಂಭವಾದ ಮಹಿಷ ದಸರಾ ಆಚರಣೆಗೆ ದಿಢೀರ್ 50 ವರ್ಷದ ಇತಿಹಾಸ ಸೃಷ್ಟಿಯಾಗಿದೆ. ಈ ಬಾರಿ 50ನೇ ವರ್ಷದ ಮಹಿಷ ದಸರಾ ಆಚರಣೆ ನಡೆಸಲಾಗುತ್ತಿದೆ ಎಂದು ಮಹಿಷ ದಸರಾ ಆಚರಣೆ ಸಮಿತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ಮಹಿಷ ದಸರಾ ಆಚರಿಸಲು ನಿರ್ಧರಿಸಿದೆ. ಆಹ್ವಾನ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಅಂತಾ ನಮೂದು ಮಾಡಲಾಗಿದೆ. ಹಾಗಾಗಿ ಈ ಬಾರಿ ಮಹಿಷಾ ದಸರಾ ವಿವಾದದ ಸ್ವರೂಪ ಪಡೆದುಕೊಂಡಿದೆ.












Click it and Unblock the Notifications