ರಾಜ್ಯಕ್ಕೆ 25 ಸಾವಿರ ಕೋಟಿ ರೂ. ಪ್ಯಾಕೇಜ್ ಗೆ ಕಾಂಗ್ರೆಸ್ ಒತ್ತಾಯ
ಮೈಸೂರು, ಏಪ್ರಿಲ್ 27: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ತತ್ತರಿಸಿರುವ ರಾಜ್ಯದ ಜನತೆಯ ನೆರವಿಗಾಗಿ ಕೂಡಲೇ 25 ಸಾವಿರ ಕೋಟಿ ರುಪಾಯಿ ವಿಶೇಷ ಪಾಕ್ಯೇಜ್ ಘೋಷಣೆಗೆ ಕೇಂದ್ರ ಸರ್ಕಾರವನ್ನು ಮೈಸೂರು ನಗರ ಕಾಂಗ್ರೆಸ್ ಒತ್ತಾಯಿಸಿದೆ.
ಮೈಸೂರು ನಗರದ ಕಾಂಗ್ರೆಸ್ ಭವನದಲ್ಲಿರುವ ಸಿಟಿ ಟಾಸ್ಕ್ ಪೋರ್ಸ್ ವಾರ್ ರೂಮ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮತ್ತು ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯಕುಮಾರ್, ರಾಜ್ಯದಲ್ಲಿ ವ್ಯಾಪಾರ, ಉದ್ದಿಮೆಗಳು ನೆಲಕಚ್ಚಿವೆ. ಜನರು ಸಂಕಷ್ಟದಲ್ಲಿದ್ದಾರೆ, ಸರ್ಕಾರ ಕೂಡಲೇ 25 ಸಾವಿರ ಕೋಟಿ ರುಪಾಯಿ ವಿಶೇಷ ಪಾಕ್ಯೇಜ್ ಘೋಷಿಸಬೇಕೆಂದು ಆಗ್ರಹಿಸಿದರು.
ಪತ್ರಕರ್ತರಿಗೆ 50 ಲಕ್ಷ ರೂ. ವಿಮೆ ಘೋಷಿಸಬೇಕು. ಕೊರೊನಾ ವೈರಸ್ ನಿಂದ ಮೃತಪಟ್ಟರೆ 50 ಲಕ್ಷ ರೂ. ಪರಿಹಾರ ನೀಡಬೇಕು. ಆರೋಗ್ಯ ಇಲಾಖೆಯ ಕೆಲ ವಿಭಾಗೀಯ ಸಿಬ್ಬಂದಿಗಳಿಗೆ ನಾಲ್ಕು ತಿಂಗಳಿಂದ ವೇತನ ಸಿಕ್ಕಿಲ್ಲ, ಕೂಡಲೇ ಅವರಿಗೆ ವೇತನ ನೀಡಬೇಕು ಎಂದು ತಿಳಿಸಿದರು.

ಇದರೊಂದಿಗೆ ಎಲ್ಲಾ ಬಡವರಿಗೆ, ಅಸಂಘಟಿತರಿಗೆ, ಆಟೋ ಮತ್ತು ಕ್ಯಾಬ್ ಚಾಲಕರಿಗೆ ಕನಿಷ್ಠ 5 ಸಾವಿರ ರೂ. ನೀಡಬೇಕೆಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications