ಬಸ್ ನಿಲ್ದಾಣದ ಮೇಲಿನ ಗುಂಬಜ್ ಒಡೆಯಲು ಪ್ರತಾಪ ಸಿಂಹ ಯಾರು: ಸಿದ್ದರಾಮಯ್ಯ ಕಿಡಿ
ಮೈಸೂರು, ನವೆಂಬರ್ 15: ಕೆ.ಆರ್.ಕ್ಷೇತ್ರದ ಬಸ್ ನಿಲ್ದಾಣದಲ್ಲಿರುವ ಗುಂಬಜ್ ನಾನೇ ತೆರವುಗೊಳಿಸುತ್ತೇನೆ ಎಂದು ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗುಂಬಜ್ ಒಡೆಯಲು ಪ್ರತಾಪ ಸಿಂಹ ಯಾವನ್ ರೀ..? ಸಂಸದನಾಗಿ ಕಾಮನ್ ಸೆನ್ಸ್ ಬೇಡ್ವಾ..? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಾಪ್ ಸಿಂಹ ಏನು ಅವರು ಮನೆಯಿಂದ ದುಡ್ಡು ಹಾಕಿ ಬಸ್ ನಿಲ್ದಾಣ ಕಟ್ಟಿಸಿದ್ದಾರಾ..? ಅಧಿಕಾರಿಗಳು ವಿನ್ಯಾಸ ಕೊಡುವಾಗ ಏನು ಮಾಡುತ್ತಿದ್ದರು. ಈಗ ನಾನೇ ಒಡೆಯುತ್ತೇನೆ ಎಂದರೆ ಅಂದರೆ ಅರ್ಥ ಏನು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಗುಂಬಜ್ ರೀತಿ ಇರುವುದನೆಲ್ಲಾ ಒಡೆದು ಬಿಡುತ್ತಾರಾ..?
600 ವರ್ಷಗಳ ಹಿಂದೆಯೇ ಮೊಘಲರು ನಮ್ಮ ದೇಶವನ್ನು ಆಳುವಾಗ ಆಗ ಇವರೆಲ್ಲಾ ಏನು ಮಾಡುತ್ತಿದ್ದರು. ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತ ಕ್ರೋಡಿಕರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಬಸ್ ನಿಲ್ದಾಣ ಕಟ್ಟಡ ಹೀಗೆ ಇರಬೇಕು ಎನ್ನುವ ರೂಲ್ಸ್ ಎಲ್ಲಿದೆ. ಸರ್ಕಾರಿ ಅಧಿಕಾರಿಗಳು ಮಾಡಿರುವ ಪ್ಲ್ಯಾನ್ ಇದು. ಗುಂಬಜ್ ರೀತಿ ಇರುವುದನೆಲ್ಲಾ ಒಡೆದು ಬಿಡುತ್ತಾರಾ..? ಬಿಜೆಪಿಯ ಈ ತಂತ್ರ ಸಫಲವಾಗಲ್ಲ. ಕರ್ನಾಟಕ ಮತ್ತು ಈ ದೇಶದ ಜನರು ಜ್ಯಾತ್ಯತೀತರು.
ಜಾತಿ ಧರ್ಮದ ವಿಚಾರವನ್ನು ಜನರು ಒಪ್ಪುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಸ್ ಯಾತ್ರೆಗೆ ನಾವೇನು ಜೋತಿಷ್ಯ ನೋಡುವುದಿಲ್ಲ
ಕಾಂಗ್ರೆಸ್ ಬಸ್ ಯಾತ್ರೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಬಸ್ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಬಸ್ ಸಿದ್ಧವಾಗುತ್ತಿದೆ. ಕೋಲಾರಕ್ಕೆ ಹೋಗಿ ಟೆಸ್ಟ್ ರನ್ ಆಗಿದೆ. ನಾನ್ನೊಂದು ತಂಡ, ಡಿ.ಕೆ ಶಿವಕುಮಾರ್ ಒಂದು ತಂಡವಾಗಿ ಪ್ರಚಾರ ಮಾಡುತ್ತೇವೆ. ಬಸ್ ಯಾತ್ರೆಗೆ ನಾವೇನು ಜೋತಿಷ್ಯ ನೋಡುವುದಿಲ್ಲ. ನಮಗೆ ರಾಹುಕಾಲ, ಗುಳಿಕ ಕಾಲ, ಯಮ್ಮಗಂಡ ಕಾಲ ಯಾವುದು ಇಲ್ಲ. ಎಲ್ಲಾ ಒಳ್ಳೆಯ ಕಾಲವೇ. ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ಸೋಲು-ಗೆಲುವು ಜನ ತೀರ್ಮಾನ ಮಾಡುತ್ತಾರೆ
ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್‌ನವರೇ ಸಾಕು ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಅವರು ಇವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಜನರ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ. ನಾನು 8 ಬಾರಿ ಗೆದ್ದಿದ್ದೇನೆ. ಇದಕ್ಕೆ ಏನು ಹೇಳುತ್ತಾರೆ. ಚುನಾವಣೆಯಲ್ಲಿ ಯಾರನ್ನೇ ಆಗಲಿ ಗೆಲ್ಲಿಸುವ ಹಾಗೂ ಸೋಲಿಸುವ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಹೇಳಿದ, ಕಟೀಲ್ ಹೇಳಿದ ಎಂದರೆ ಆಗುತ್ತದಾ..? ಈ ಬಗ್ಗೆ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ಬಸ್ ನಿಲ್ದಾಣದ ಗುಂಬಜ್‌ನ್ನು ತೆರವು ಮಾಡುತ್ತೇನೆ ಎಂದ ಪ್ರತಾಪ್ ಸಿಂಹ
ಮೈಸೂರಿನ ರಂಗಾಯಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ ಕೆ.ಆರ್.ಕ್ಷೇತ್ರದ ಬಸ್ ನಿಲ್ದಾಣದಲ್ಲಿ ಗುಂಬಜ್ ಇದೆ. ಮಧ್ಯದಲ್ಲಿ ಒಂದು ದೊಡ್ಡ ಗುಂಬಜ್ ಹಾಗೂ ಅಕ್ಕಪಕ್ಕ ಎರಡು ಸಣ್ಣ ಗುಂಬಜ್ ಇದ್ದರೆ ಅದು ಮಸೀದಿಯೇ. ಹಾಗಾಗಿ ಈಗಾಗಲೇ ಅದನ್ನು ತೆರವುಗೊಳಿಸುವಂತೆ ಸೂಚಿಸಿದ್ದೇನೆ. ಗುಂಬಜ್ ರೀತಿ ನಿರ್ಮಿಸಿರುವ ಬಸ್ ಶೆಲ್ಟರ್‌ಗಳನ್ನು ನಿಗದಿತ ಅವಧಿಯೊಳಗೆ ತೆಗೆಯಬೇಕು. ಒಂದು ವೇಳೆ ಬಸ್ ನಿಲ್ದಾಣದಲ್ಲಿರುವ ಗುಂಬಜ್ ತೆಗೆಯದಿದ್ದರೆ ನಾನೇ ತೆರವುಗೊಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.











Click it and Unblock the Notifications