ಮೈಸೂರಿನಲ್ಲಿ ಟ್ರಿಣ್-ಟ್ರಿಣ್ ಸೈಕಲ್ ಯೋಜನೆಗೆ ಸಿದ್ದರಾಮಯ್ಯ ಚಾಲನೆ
ಮೈಸೂರು, ಜೂನ್ 04 : ಹಲವು ದಿನಗಳಿಂದ ಮುಂದೂಡುತ್ತಲೇ ಬಂದಿದ್ದ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಹಂಚಿಕೆ (ಪಿಬಿಎಸ್) ಯೋಜನೆ ಟ್ರಿಣ್ ಟ್ರಿಣ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಬಳಿ ಸೈಕಲ್ ತುಳಿಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಲಾಗಿದೆ. 1961ರಲ್ಲಿ ನಾನು ವಿದ್ಯಾಭ್ಯಾಸ ಮಾಡುವಾಗ ಮೈಸೂರಿನಲ್ಲಿ ಸೈಕಲ್ ನಲ್ಲೇ ಓಡಾಡುತ್ತಿದ್ದೆ ಎಂದು ಬಾಲ್ಯದ ನೆನಪುಗನ್ನು ಮೆಲುಕು ಹಾಕಿದರು.[ಮೈಸೂರಿನಲ್ಲಿ ಪ್ರವಾಸಿಗರಿಗೆ ಬಾಡಿಗೆ ಸೈಕಲ್, ಕೇಳಲಿದೆ ಟ್ರಿಣ್-ಟ್ರಿಣ್]

ಮೈಸೂರು ಸುಂದರವಾದ ನಗರ. ಈ ನಗರದ ಪರಿಸರ, ಸೌಂದರ್ಯ ಕಾಪಾಡುವುದು ಅವಶ್ಯ. ನಗರದಲ್ಲಿ 12 ಲಕ್ಷ ಜನಸಂಖ್ಯೆ ಇದ್ದು, ಆರೂವರೆ ಲಕ್ಷ ವಾಹನಗಳಿವೆ. ಜಗತ್ತಿನ 600 ನಗರಗಳಲ್ಲಿ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆ ಇದೆ.
ವಾಹನಗಳ ದಟ್ಟಣೆ, ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನಾವು ಹೆಚ್ಚಾಗಿ ಪರಿಸರ ಸ್ನೇಹಿ ವಾಹನಗಳನ್ನು ಸಂಚಾರಕ್ಕೆ ಬಳಸುವುದು ಸೂಕ್ತ. ನಾನು ಬಹಳ ವರ್ಷ ಸೈಕಲ್ ತುಳಿದಿದ್ದೇನೆ.
ಮೈಸೂರಿನಿಂದ 20 ಕಿ.ಮೀ.ದೂರ ಇರುವ ನಮ್ಮೂರಿಗೆ ಪ್ರತಿ ಶನಿವಾರ ಸೈಕಲ್ ನಲ್ಲೇ ಹೋಗಿ ಬರುತ್ತಿದ್ದೆ. ಹೀಗಾಗಿ ಸೈಕಲ್ ತುಳಿಯುವ ಅಭ್ಯಾಸ ನನಗಿದೆ ಎಂದರು.

ಮೈಸೂರಿನಲ್ಲಿ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆ ಜಾರಿಗೆ ತಂದಿರುವುದು ಬಹಳ ಒಳ್ಳೆಯದು. ನಗರದ ಜನರಿಗೆ ಇದು ಒಳ್ಳೆಯ ಕೊಡುಗೆ. ಬೆಂಗಳೂರು ನಗರದಲ್ಲೂ ಈ ವ್ಯವಸ್ಥೆ ಜಾರಿಗೆ ತರುವ ಆಲೋಚನೆ ಇದೆ ಎಂದು ಹೇಳಿದರು.
ಈ ಸಂದರ್ಭ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕ ಸೋಮಶೇಖರ್, ಪಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications