ಮೈಸೂರಿನಲ್ಲಿ ಇಂದಿನಿಂದ ಮೋಡ ಬಿತ್ತನೆ ಕಾರ್ಯ ಆರಂಭ
ಮೈಸೂರು, ಜುಲೈ 26: ಮೈಸೂರಿನಲ್ಲಿ ಗುರುವಾರದಿಂದ ಮೋಡ ಬಿತ್ತನೆ ಕಾರ್ಯ ಆರಂಭಗೊಂಡಿದೆ. ಮೋಡ ಬಿತ್ತನೆ ಯೋಜನೆಗಾಗಿ ಈಗಾಗಲೇ ಬೆಂಗಳೂರಿನಿಂದ ಒಂದು ವಿಮಾನ ಮೈಸೂರಿಗೆ ಬಂದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಈ ಭಾಗದಲ್ಲಿ 90 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ಮುಂದುವರಿಯಲಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು 2019-20, 2020-21ನೇ ವರ್ಷವನ್ನು ಗಮನದಲ್ಲಿಟ್ಟುಕೊಂಡು ವೈಮಾನಿಕ ಮೋಡ ಬಿತ್ತನೆ ಕೈಗೊಂಡಿದ್ದರು. ಎರಡು ವರ್ಷಗಳ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಅಲ್ಲದೇ ಜೂನ್ ಅಂತ್ಯದಲ್ಲಿ ಬಿತ್ತನೆ ಮಾಡಲು ತೀರ್ಮಾನಿಸಿದ್ದು, ಈಗಾಗಲೇ ತಡವಾಗಿದೆ. ಹಾಗಾಗಿ ಇಂದಿನಿಂದ ಎರಡು ವಿಮಾನಗಳನ್ನು ಬಳಸಿ ಮೈಸೂರು ಹಾಗೂ ಹುಬ್ಬಳ್ಳಿ ನಗರವನ್ನು ಕೇಂದ್ರವಾಗಿಟ್ಟುಕೊಂಡು ವೈಮಾನಿಕ ಬಿತ್ತನೆ ಕಾರ್ಯವನ್ನು ಆರಂಭಿಸಲಾಗಿದೆ.

ಎರಡು ವರ್ಷಗಳ ವೈಮಾನಿಕ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ 45 ಕೋಟಿ ರೂಪಾಯಿ ಅನುದಾನ ನೀಡಿದೆ. ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಿಂದ ಹಾರಿದ ಎರಡು ವಿಮಾನಗಳು ಪ್ರಾಯೋಗಿಕವಾಗಿ ಮೋಡ ಬಿತ್ತನೆ ಮಾಡಿ ಪರಿಶೀಲನೆ ನಡೆಸಿವೆ. ಒಂದು ವಿಮಾನ ಕನಕಪುರದ ಕಡೆಗೆ ಹಾಗೂ ಮತ್ತೊಂದು ಕೋಲಾರದ ಕಡೆಗೆ ಮೋಡ ಬಿತ್ತನೆ ಕಾರ್ಯವನ್ನು ಯಶಸ್ವಿಯಾಗಿ ಮಾಡಿವೆ. 2017ರಲ್ಲಿ ಮೋಡ ಬಿತ್ತನೆ ಮಾಡಿದಾಗ ಸಾಧಾರಣ ಮಳೆ ಶೇ.28 ಹೆಚ್ಚಾಗಿತ್ತು. ಮೈಸೂರು ಜಿಲ್ಲೆಯಲ್ಲಿ ವೈಮಾನಿಕ ಮೋಡ ಬಿತ್ತನೆಯ ನಂತರ ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications