NEET: ಪ್ರಧಾನಿ ಮನೆ ಮುಂದೆ ರಾಹುಲ್ ಗಾಂಧಿ ಧರಣಿ ಹೈಡ್ರಾಮಾ! ನಾಯಕರನ್ನು ವಶಕ್ಕೆ ಪಡೆದ ಪೊಲೀಸರು
ನವದೆಹಲಿ: ನೀಟ್ ವಿದ್ಯಾರ್ಥಿಗಳ ಪರವಾಗಿ ಪ್ರತಿಭಟಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯ 'ಸಂಸತ್ ಚಲೋ' ಬೆಂಬಲಿಸಿ ಇಂದು ಮಂಗಳವಾರ ದೆಹಲಿಯ ಪ್ರಧಾನಿ ನರೇಂದ್ರ ಮೋದಿಯವರ ಮನೆ ಮುಂದೆ ಧರಣಿ ನಡೆಸುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರನ್ನು ಪೊಲೀಸರ ವಶಕ್ಕೆ ಪಡೆಯುವ ಮೂಲಕ ಸ್ಥಳದಿಂದ ಪ್ರತಿಭಟನಾಕಾರರ ಗುಂಪನ್ನು ತೆರವು ಮಾಡಿದ್ದಾರೆ.
ಕೇಂದ್ರ ಸಚಿವರ ರಾಜೀನಾಮೆ ಹಾಗೂ ಸಂಸತ್‌ನಲ್ಲಿ ನೀಟ್ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಪ್ರಧಾನಿ ನಿವಾಸ ಮುಂದೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಅನೇಕ ನಾಯಕರು ಪ್ರತಿಭಟನೆ ಅರಂಭಿಸಿದ್ದರು. ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ವರಿಷ್ಠರಾದ ಕೆಸಿ ವೇಣಗೋಪಾಲ್, ರಣದೀಪ್ ಸುರ್ಜೆವಾಲ ಸೇರಿದಂತೆ ಅನೇಕ ನಾಯಕರು ಧರಣಿ ಕೂತಿದ್ದರು.

ಪಟ್ಟು ಹಿಡಿದ ರಾಗಾ: ಪೊಲೀಸರೊಂದಿಗೆ ವಾಗ್ವಾದ
ಪ್ರತಿಭನಟನೆಯಲ್ಲಿ ಇಡೀ ದೇಶದ ಜನರು ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಕರೆ ನೀಡಿದ್ದರು. ಇಂದು ರಾತ್ರಿ ಪೂರ್ತಿ ಸ್ಥಳದಲ್ಲೇ ಪ್ರತಿಭಟನೆ ಮುಂದುವರಿಸಲು ರಾಹುಲ್ ಗಾಂಧಿ ನಿರ್ಧರಿಸಿದ್ದರು. ಈ ವೇಳೆ ಪೊಲೀಸರು ಮನವೊಲಿಸಲು ಮುಂದಾದರು. ಆಗ ಸ್ಥಳದಿಂದ ಕದಲುವುದಿಲ್ಲ ಎಂದು ರಾಹುಲ್ ಗಾಂಧಿ ಪಟ್ಟು ಹಿಡಿದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ವಶಕ್ಕೆ ಪಡೆದರು. ಪ್ರಧಾನಿ ನಿವಾಸದ ಮುಂದೆ ಹೈಡ್ರಾಮಾವೇ ನಡೆಯಿತು.
ನೀಟ್ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ರಾಜಕೀಯ!
ನೀಟ್ ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ಸಂಸತ್ ಚಲೋ ಸೋಮವಾರ ನಡೆದಿತ್ತು. ಈ ಮೂಲಕ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಯಿತು. ಈ ವೇಳೆ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ನಡೆಸಿದರು. ಇದನ್ನು ಖಂಡಿಸಿ ಕೇಂದ್ರದ ಮೇಲೆ ಮತ್ತಷ್ಟು ಒತ್ತಡ ತರಲು, ಸಂಸತ್ ಅಧಿವೇಶನದಲ್ಲಿ ನೀಟ್ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಹಾಗೂ ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಆಗ್ರಹಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರಧಾನಿ ಮೋದಿ ಪಾರಾಗಲು ಸಾಧ್ಯವಿಲ್ಲ
ಪೊಲೀಸ್ ವಶಕ್ಕೂ ಮುನ್ನೆ ಮಾತನಾಡಿದ್ದ ರಾಹುಲ್ ಗಾಂಧಿ, ನೆನ್ನೆ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದಾಳಿಯು ದೇಶದ ಎಲ್ಲ ಕುಟುಂಬದವರ ಮೇಲಿನ ದಾಳಿ ಎಂದು ಬಣ್ಣಿಸಿದರು. ನೀಟ್ ಅಕ್ರಮ ಬಗ್ಗೆ ಯಾವುದೇ ಉತ್ತರ ನೀಡದೇ, ಕಲಾಪ ವೇಳೆ ಚರ್ಚೆಗೆ ಅವಕಾಶ ನೀಡದೇ, ಯಾವೊಂದು ಪರಿಣಾಮ ಎದುರಿಸದೇ ಈ ಪ್ರಕರಣದಿಂದ ಪಾರಾಗಬಹುದು ಎಂದು ಪ್ರಧಾನಿ ಮೋದಿ ಭಾವಿಸಿದಂತಿದೆ. ಅದ್ಯಾವುದು ಸಾಧ್ಯವಿಲ್ಲ ಎಂದು ಹೇಳಿದರು.
ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ಈ ಸಂಬಂಧ ಪ್ರಧಾನಿ ನಿವಾಸದ ಮುಂದೆ ನಡೆಯುತ್ತಿರುವ ಧರಣಿಯಲ್ಲಿ ನಮ್ಮೊಂದಿಗೆ ದೇಶದ ಜನರು ಕೈಜೋಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವುದನ್ನು ನಿರ್ಲಕ್ಷಿಸುವ ಹಾಗಿಲ್ಲ ಎಂದು ಅವರು ತಿಳಿಸಿದ್ದರು.
ಪೊಲೀಸ್ ವಶದಿಂದ ಎಲ್ಲ ನಾಯಕು ರಿಲೀಸ್
ಧರಣಿನಿರತ ಪ್ರತಿಭಟನಾಕಾರರಾದ ರಾಹುಲ್ ಗಾಂಧಿ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರನ್ನು ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಪೊಲೀಸ್ ವಶದಿಂದ ಬಿಡುಗಡೆ ಮಾಡಲಾಯಿತು. ನೆನ್ನೆ ಶುರುವಾದ ಸಂಸತ್ ಕಲಾಪ ಮುಂದಿನ 25ದಿನ ಮುಂದುವರಿಯಲಿದ್ದು, ಅಲ್ಲಿ ಕೂಡ ನೀಟ್ ಅಕ್ರಮ ಬಗ್ಗೆ ಚರ್ಚೆಗೆ ಮತ್ತೆ ಕಾಂಗ್ರೆಸ್ ನಿರ್ಧರಿಸಿದ್ದು, ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಲಿದೆ ಎಂದು ತಿಳಿದು ಬಂದಿದೆ.


Click it and Unblock the Notifications
