Channapatna By Election: 'ನಾಲ್ಕೈದು ದಿನದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ'
ಮೈಸೂರು, ಅಕ್ಟೋಬರ್ 17: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಈ ಪೈಕಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಉಪ ಚುನಾವಣೆ ಭಾರೀ ರಂಗು ಪಡೆದುಕೊಂಡಿದ್ದು, ಅಭ್ಯರ್ಥಿಗಳ ಘೋಷಣೆ ಬಗ್ಗೆ ಎಲ್ಲರ ಚಿತ್ತ ಹರಿದಿದೆ. ಒಂದೆಡೆ ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಟಿಕೆಟ್ ಕೈ ತಪ್ಪು ಸಾಧ್ಯತೆಗಳಿಂದ ಅಸಮಾಧಾನಗೊಂಡಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.
ಸದ್ಯ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಗೆಲುವಿಗಾಗಿ ನಡೆಸುತ್ತಿರುವ ಕಸರತ್ತಿನ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಲೇವಡಿ ಮಾಡಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಸರತ್ತಿನ ಬಗ್ಗೆ ಲೇವಡಿ ಮಾಡಿರುವ ಶಾಸಕ ತನ್ವೀರ್ ಸೇಠ್, ಒಬ್ಬರ ಕೈಯಲ್ಲಿ ಹಾರೆ ಇದೆ. ಮತ್ತೊಬ್ಬರ ಕೈಯಲ್ಲಿ ಗುದ್ದಲಿ ಇದೆ. ಯಾರಿಗೆ ಟಿಕೆಟ್ ಸಿಕ್ಕರೂ ಅವರ ಪಿಚ್ ಅನ್ನು ಅವರೇ ಅಗೆಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣವೇ ಬೇರೆ. ಚನ್ನಪಟ್ಟಣ ಪರಿಸ್ಥಿತಿಯೇ ಬೇರೆ. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಬಹಳ ವಿಶೇಷವಾಗಿದೆ. ಶಿಗ್ಗಾವ್, ಸಂಡೂರು ಒಂದಾದರೆ, ಚನ್ನಪಟ್ಟಣ ಅತ್ಯಂತ ಕುತೂಹಲ ಮೂಡಿಸಿದೆ. ಈಗಾಗಲೇ ಅಭ್ಯರ್ಥಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಎಂದರು.

ಮಾತು ಮುಂದುವರಿಸಿದ ಶಾಸಕ ತನ್ವೀರ್ ಸೇಠ್, ಚನ್ನಪಟ್ಟಣಕ್ಕೆ ಮೈತ್ರಿ ಅಭ್ಯರ್ಥಿ ಯಾರು, ಕಾಂಗ್ರೆಸ್‌ನಿಂದ ಯಾರು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಕಾಂಗ್ರೆಸ್‌ನಿಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾನೇ ಅಭ್ಯರ್ಥಿ ಅಂತ ಹೇಳಿದ್ದಾರೆ. ಆದಾಗ್ಯೂ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್ ಅಭ್ಯರ್ಥಿ ಹಾಕುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಇನ್ನು ನಾಲ್ಕೈದು ದಿನದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುತ್ತದೆ. ಡಿ.ಕೆ ಸುರೇಶ್ ರಾಜಕೀಯವಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಪಕ್ಷಕ್ಕೆ ಇದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಶಿಗ್ಗಾವಿಯಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿ ಅಂತ ನಾನೂ ಕೂಡ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯುವ ಸರಕಾರ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದು ಸಮುದಾಯ ಗುರಿಯಾಗಿ ಇಟ್ಟುಕೊಂಡು ಅಮಾಯಕರ ಮೇಲೆ ಕೇಸ್ ಹಾಕಿತ್ತು. ಆ ಕೇಸ್ ಈಗ ವಾಪಾಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ ಅಂತಾ ಶಾಸಕ ತನ್ವೀರ್ ಸೇಠ್ ಪ್ರಶ್ನಿಸಿದ್ದಾರೆ.












Click it and Unblock the Notifications