ಚಾಮುಂಡೇಶ್ವರಿ ದೇವಾಲಯದ ಸುತ್ತ ವ್ಯಾಪಾರ ವಹಿವಾಟಿಗೆ ನಿರ್ಬಂಧ
ಮೈಸೂರು, ಮೇ 04: ಪ್ರತಿ ವರ್ಷ ಕೋಟ್ಯಾಂತರ ಭಕ್ತರು ಭೇಟಿ ನೀಡುವ ಸ್ಥಳ ಮೈಸೂರಿನ ಚಾಮುಂಡೇಶ್ವರಿ ದೇವಾಲಯವಾಗಿದೆ. ದೇಶ-ವಿದೇಶದ ಭಕ್ತರು ಕರ್ನಾಟಕದ ನಾಡ ದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಾರೆ. ಗಣ್ಯರು, ಭಕ್ತರು ಸುಲಭವಾಗಿ ದೇವರ ದರ್ಶನ ಪಡೆಯುವಂತೆ ಮಾಡಲು ಹಲವಾರು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಆದೇಶವೊಂದನ್ನು ಹೊರಡಿಸಿದೆ.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದೆ. ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯದ ಸುತ್ತಮುತ್ತಲೂ ವ್ಯಾಪಾರ ವಹಿವಾಟು ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿದೆ. ದೇವಾಲಯದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಿಷೇಧಿಲಾಗಿದೆ.

ದೇವಾಲಯಕ್ಕೆ ಆಗಮಿಸುವ ಗಣ್ಯರು, ಅತಿಗಣ್ಯ ವ್ಯಕ್ತಿಗಳು, ಪ್ರವಾಸಿಗರು, ವಿದೇಶಿ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಯಾವುದೇ ಅಡೆತಡೆಯಾಗದ ರೀತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚಾಮುಂಡಿ ಬೆಟ್ಟದ ಸ್ಥಳೀಯ ಗ್ರಾಮಸ್ಥರು, ವ್ಯಾಪಾರಿಗಳು, ಭಕ್ತರು ಮತ್ತು ಪ್ರವಾಸಿಗರು ಪ್ರಾಧಿಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಪ್ರಕಟಣೆಯ ಮಾಹಿತಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ. ಜೆ. ರೂಪಾ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. 'ಪ್ರವಾಸಿಗರು ಮತ್ತು ಭಕ್ತರ ಅನುಕೂಲ ದೃಷ್ಟಿಯಿಂದ ಚಾಮುಂಡೇಶ್ವರಿ ದೇವಸ್ಥಾನದ ಸುತ್ತಲಿನ 100 ಮೀಟರ್ ಪ್ರದೇಶಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕಿದೆ' ಎಂದು ಹೇಳಿದ್ದಾರೆ.
ಇದು ಈ ಹಿಂದೆ ಚಿಕ್ಕ ದೇವಾಲಯವಾಗಿತ್ತು. ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ದೇವಾಲಯವಾಗಿ ಅಭಿವೃದ್ಧಿಯಾಗಿದೆ. ಪ್ರತಿ ವರ್ಷ ಕೋಟ್ಯಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಪ್ರತಿನಿತ್ಯ ಭಕ್ತರಿಂದ ದೇವಾಲಯ ತುಂಬಿ ಹೋಗಿರುತ್ತದೆ.
1799ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಅರಾಧಕರಾಗಿದ್ದು, ಶ್ರದ್ಧಾ ಭಕ್ತಿಯಿಂದ ದೇವಾಲಯವನ್ನು ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವಾಗಿ ಮಾಡಿದರು. ಮೈಸೂರು ರಾಜಮನೆತನದವರು ನಾಡದೇವಿ ಶ್ರೀ ಚಾಮುಂಡೇಶ್ವರಿಯನ್ನು ಈಗಲೂ ಪೂಜಿಸುತ್ತಾರೆ.
ಕರ್ನಾಟಕ ಸರ್ಕಾರ ದೇವಾಲಯದ ಅಭಿವೃದ್ಧಿ, ಆಡಳಿತವನ್ನು ನೋಡಿಕೊಳ್ಳಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿದೆ. ದೇವಾಲಯದ ಅಭಿವೃದ್ಧಿ, ಆಡಳಿತ, ಭಕ್ತರಿಗೆ ಬೇಕಾದ ಸೌಲಭ್ಯಗಳ ಕುರಿತು ಪ್ರಾಧಿಕಾರ ತೀರ್ಮಾನವನ್ನು ಕೈಗೊಳ್ಳುತ್ತದೆ.
ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ ಪೌರಾಣಿಕ ಹಿನ್ನಲೆಯನ್ನು ಹೊಂದಿದೆ. ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ದೇವಿ ಮಹಾತ್ಮೆಯಲ್ಲಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟ ಎಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು 8 ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ಎಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಆದರ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವು 8 ಬೆಟ್ಟಗಳ ಪೈಕಿ ಒಂದಾಗಿದೆ.
ಚಾಮುಂಡಿಬೆಟ್ಟದ ಚಾರಿತ್ರಿಕ ಹಿನ್ನಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆಯೂ ದೇವಾಲಯಕ್ಕೆ ಇದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನಲೆಯನ್ನು ಗುರುತಿಸಲಾಗಿದೆ.
ಈ ದೇವಾಲಯವನ್ನು ಚೌಕಾಕೃತಿಯಲ್ಲಿ ನಿರ್ಮಾಣ ಮಾಡಲಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಾಲಯ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ಗೋಪುರ ಮತ್ತು ಗರ್ಭಗುಡಿಯ ಮೇಲೆ ವಿಮಾನ ಶಿಖರಗಳಿವೆ.












Click it and Unblock the Notifications