ಚಕ್ರವರ್ತಿ ಸೂಲಿಬೆಲೆ ಜತೆ ಒನ್ಇಂಡಿಯಾ ಕನ್ನಡ ಸಂದರ್ಶನ
ಚಿಂತಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರ ವಿಶೇಷ ಸಂದರ್ಶನವನ್ನು ಒನ್ಇಂಡಿಯಾ ಕನ್ನಡದ ವರದಿಗಾರ್ತಿ ಯಶಸ್ವಿನಿ ಮಾಡಿದ್ದಾರೆ. ಅವರ ನೇರ ಪ್ರಶ್ನೆಗಳಿಗೆ ಸೂಲಿಬೆಲೆಯವರು ಖುಲ್ಲಂಖುಲ್ಲಾ ಉತ್ತರ ನೀಡಿದ್ದಾರೆ.
ಮೈಸೂರು, ಮಾರ್ಚ್ 1: ಚಕ್ರವರ್ತಿ ಸೂಲಿಬೆಲೆ ಎಂಬ ಹೆಸರು ಕೇಳಿದಾಕ್ಷಣ ಕಿವಿಗಳು ನೆಟ್ಟಗಾಗುತ್ತವೆ. ಇನ್ನು ಅವರು ಮಾತನಾಡುತ್ತಿದ್ದಾರೆ ಅಂದರೆ, ಅದೇನೋ ಮಹತ್ವದ್ದೇ ಹೇಳುತ್ತಿರಬೇಕು ಎನಿಸಿ, ಕೇಳುವ ಮನಸ್ಸಾಗುತ್ತದೆ. ಬಲಪಂಥೀಯ ವಿಚಾರಗಳ ಪ್ರಬಲ ಪ್ರತಿಪಾದಕ, ಪ್ರಖರ ವಾಗ್ಮಿ, ಅಂಕಣಕಾರ, ರಾಷ್ಟ್ರೀಯತೆ ವಿಚಾರಧಾರೆಗಳ ಪ್ರಚಾರಕ ಚಕ್ರವರ್ತಿ ಸೂಲಿಬೆಲೆ ಅವರ ಸಂದರ್ಶನ ಇಲ್ಲಿದೆ.
ಯುವಕರ ಪಾಲಿಗೆ ಅಯಸ್ಕಾಂತದಂತೆ ಇರುವ ಚಕ್ರವರ್ತಿ ಸೂಲಿಬೆಲೆ ಮೇಲೆ ಹಲವಾರು ಆರೋಪಗಳೂ ಇವೆ. ಅವೆಲ್ಲ ಪಕ್ಕಕ್ಕಿಟ್ಟರೆ ಅವರು ವಿವೇಕಾನಂದರ ಚಿಂತನೆಗಳನ್ನು ಸಾರುವ ಸಾಧಕ ಎನ್ನುವವರಿದ್ದಾರೆ. ಒಟ್ಟಾರೆ ಸೂಲಿಬೆಲೆ ಅಂದರೆ ವಿವಾದಗಳು ಕೂಡ ಇತ್ತೀಚೆಗೆ ತಳಕು ಹಾಕಿಕೊಂಡಿವೆ. ಅವರ ಬಗ್ಗೆ ಕೇಳಿದ ಎಲ್ಲ ಪ್ರಶ್ನೆಗಳಿಗೂ ಚಕ್ರವರ್ತಿ ಸೂಲಿಬೆಲೆ ಖುಲ್ಲಂ ಖುಲ್ಲಾ ಉತ್ತರಿಸಿದ್ದಾರೆ.[ನೇತ್ರಾವತಿ ತೀರದಲ್ಲೊಂದು ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂಗಮ]

ಪ್ರಶ್ನೆ: ಸೂಲಿಬೆಲೆಯವರೇ ನಿಮಗೂ ಹಾಗೂ ವಿವಾದಗಳಿಗೂ ಏನಿದು ಅವಿನಾಭಾವ ಸಂಬಂಧ?
ಉತ್ತರ: ಅದೇನೋ ನನಗೂ ಗೊತ್ತಿಲ್ಲ. ಟೀಕೆಗಳನ್ನು ನಾನೆಂದಿಗೂ ವಿರೋಧಿಸಿಲ್ಲ. ವಿರೋಧಿಸುವುದೂ ಇಲ್ಲ. ನಿಂದಕರಿರಬೇಕು ಜಗದೊಳಗೆ ಎಂಬ ಮಾತು ಪಾಲಿಸುವವನು ನಾನು. ಹಾಗೆಯೇ ಅದನ್ನು ಅನುಸರಿಸುತ್ತಿರುವವನು ನಾನು. ನಿಂದಕರಿದ್ದಾಗ ಮಾತ್ರ ನಾನು ಜಗತ್ತಿಗೆ ಪರಿಚಯವಾಗಲು ಸಾಧ್ಯವಾಗಿದ್ದು.

ಪ್ರಶ್ನೆ: ನೀವೇನಾದರೂ ವಿವೇಕಾನಂದರ ಪೇಟೆಂಟ್ ಸ್ವೀಕರಿಸಿದ್ದೀರಾ? ನಿಮಗೆ ಅವರನ್ನು ಹೊರತುಪಡಿಸಿ ಬೇರಾವ ಸಾಧಕರು ಕಂಡಿಲ್ಲವೇ?
ಉತ್ತರ: ಖಂಡಿತಾ ಸಾಧಕರಿದ್ದಾರೆ. ನಾನೇನೂ ವಿವೇಕಾನಂದರನ್ನು ಪೇಟೆಂಟ್ ಆಗಿ ಸ್ವೀಕರಿಸಿಲ್ಲ. ಅವರ ಆದರ್ಶಗಳು ನನಗೆ ಮಾರ್ಗದರ್ಶಕ ಹಾಗೂ ಸ್ಫೂರ್ತಿದಾಯಕ. ಹಾಗಾಗಿ ನನ್ನನ್ನು ಕಾರ್ಯಕ್ರಮಗಳಿಗೂ ಕರೆಯುವವರಿಗೂ ಗೊತ್ತು: ನಾನು ವಿವೇಕಾನಂದರ ಬಗ್ಗೆ ಆ ಕಾರ್ಯಕ್ರಮಗಳಲ್ಲಿ ಮಾತನಾಡುತ್ತೇನೆ ಎಂದು. ನಾನು ವಿವೇಕಾನಂದರನ್ನು ಪೂಜಿಸುತ್ತೇನೆ. ಹಾಗಾಗಿ ಅವರು ನನಗೆ ಐಕಾನ್.[ಪಾಕಿಸ್ತಾನದಲ್ಲಿ ಹಿಂದೂ ವಿವಾಹ ಮಸೂದೆ ಅಂಗೀಕಾರ]
ಪ್ರಶ್ನೆ: ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು...?
ಉತ್ತರ: ಹೌದು. ಡೈರಿ ಹಗರಣದ ಬಗ್ಗೆ ಕೇಳ್ತಿದೀರಾ? ಭ್ರಷ್ಟಾಚಾರ ಈ ಪರಿಯಲ್ಲಿ ನಡೆಯುತ್ತಿರುವುದು ಖಂಡನೀಯ. ಜನರು ತಮ್ಮ ಪೈಕಿ ಒಬ್ಬರನ್ನು ಉತ್ತಮ ಪ್ರಜೆ ಎಂದು ಆಯ್ಕೆ ಮಾಡಿ ಕಳುಹಿಸುವುದು ಸಮಾಜ ಸೇವೆ ಮಾಡಲಿಕ್ಕಾಗಿ ಹಾಗೂ ದೇಶದ ಅಭ್ಯುದಯಕ್ಕಾಗಿ. ಅದು ಬಿಟ್ಟು, ನಮ್ಮ ನಾಯಕರು ತಾವು ತಿಂದು, ತೇಗಿ ಭ್ರಷ್ಟರಾಗುತ್ತಿರುವುದು ಅಸಹ್ಯಕರ ಸಂಗತಿ.
ಪ್ರಶ್ನೆ: ಮಂಗಳೂರಿನ ಅಭಿಷೇಕ್ ಆತ್ಮಹತ್ಯೆ ಪ್ರಕರಣದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡಿತ್ತಲ್ಲ?
ಉತ್ತರ: ಅಭಿಷೇಕ್ ಸಾವು ನಿಜವಾಗಲೂ ವಿಷಾದಕರ. ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು ಕಾಲೇಜು ಆಡಳಿತ ಮಂಡಳಿ. ಇದಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ. ಯಾವುದೋ ಆಗದ ಶಕ್ತಿ ಸುಖಾಸುಮ್ಮನೆ ಆತನ ಮೇಲೆ ಎಫ್ ಐಆರ್ ದಾಖಲು ಮಾಡಿದ್ದಲ್ಲದೆ ಆತನ ಜೀವನವನ್ನೇ ಬಲಿ ತೆಗೆದುಕೊಂಡಿದೆ.
ಸಾವಿನ ಸುದ್ದಿ ತಿಳಿದ ಕ್ಷಣವೇ ಅವರ ಮನೆಗೆ ಭೇಟಿ ಮಾಡಿದ್ದೆ. ಆತನ ತಾಯಿ ಕೂಡ ನನ್ನ ಬಳಿ ಹೇಳಿಕೊಂಡಿದ್ದಾರೆ. ಇದರಲ್ಲಿ ನಿಮ್ಮ ಪಾತ್ರ ಏನೂ ಇಲ್ಲ ಎಂದು. ಆದರೂ ಆತನ ಸಾವು ನನ್ನಲ್ಲಿ ಬೇಸರವುಂಟು ಮಾಡಿದ್ದಂತೂ ನಿಜ. ಆತ್ಮಹತ್ಯೆಯೊಂದೇ ಎಲ್ಲದಕ್ಕೂ ಕೊನೆಯಲ್ಲ.[ಮುಸ್ಲಿಮರೂ ಸೇರಿ ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದೂಗಳು: ಭಾಗವತ್]
ಪ್ರಶ್ನೆ: ಮುಂದಿನ ಚುನಾವಣೆಯಲ್ಲಿ ಸ್ಫರ್ಧಿಸುತ್ತೀರಾ?
ಉತ್ತರ: ನಾನು ಈಗಾಗಲೇ ಸಿಎಂ. ಎಸ್, ನನ್ನ ಹೆಸರಿನಲ್ಲೇ ಮಿಥುನ್ ಎಂಬ ಪದವಿದೆ. ಮಿಥುನ್ ಎಂದರೇ ಮುಖ್ಯಸ್ಥ. ನಾನು ಮುಂದಿನ ಚುನಾವಣೆಯಿರಲೀ ಯಾವ ಚುನಾವಣೆಗೂ ಸ್ಫರ್ಧಿಸುವುದಿಲ್ಲ. ಇದು ನನ್ನ ಶಪಥ. ನನ್ನ ಜೀವನ ದೇಶ ಸೇವೆಗೆ ಮೀಸಲು. ವಿವೇಕಾನಂದರ ಆರಾಧನೆಗೆ ಮಾತ್ರ ಸೀಮಿತ.

ಪ್ರಶ್ನೆ: ನೀವೊಬ್ಬ ಬಿಜೆಪಿ ಕಾರ್ಯಕರ್ತ ಹಾಗೂ ನರೇಂದ್ರ ಮೋದಿ ದತ್ತು ಪುತ್ರ ಎಂಬ ಮಾತುಗಳಿದ್ದಾವಲ್ಲ?
ಉತ್ತರ: ಮೊದಲೇ ಹೇಳಿದಂತೆ ನಾನು ಯಾರೊಬ್ಬರ ದತ್ತು ಪುತ್ರನಲ್ಲ ಹಾಗೂ ಕಾರ್ಯಕರ್ತನೂ ಅಲ್ಲ. ನನ್ನ ಆದರ್ಶಗಳು ಮೋದಿಯವರ ಮಾತುಗಳಿಂದ ಹಾಗೂ ಅವರ ನಡವಳಿಕೆ ರೂಪದಿಂದ ಹೊರಬಂದವು ಹಾಗಾಗಿ ನಾನು ಅವರನ್ನು ಫಾಲೋ ಮಾಡಿದೆ. ಅದರಂತೆಯೇ ಅವರು ನಡೆದುಕೊಂಡು ಯೂತ್ ಐಕಾನ್ ಆಗಿದ್ದಾರೆ. ಅವರ ಆದರ್ಶ ಕೂಡ ವಿವೇಕಾನಂದರೇ ಆಗಿರುವುದು ನನಗೆ ಮತ್ತಷ್ಟು ಸಂತಸದಾಯಕ.[ಹಿಂದೂ ಅವಹೇಳನ: ಬಾಲಿವುಡ್ ಜಗತ್ತನ್ನು ಹುರಿದು ಮುಕ್ಕಿದ ಟ್ವಿಟ್ಟಿಗರು]

ಪ್ರಶ್ನೆ: ಬಿಗ್ ಬಾಸ್ ಗೆ ನಿಮಗೆ ಆಹ್ವಾನ ಬಂದಿದ್ದ ಸುದ್ದಿ ನಿಜವೇ?
ಉತ್ತರ: ಖಂಡಿತಾ ಹೌದು. ಬಿಗ್ ಬಾಸ್ ಸ್ಫರ್ಧಿಯಾಗಿ ನನಗೆ ಆಹ್ವಾನ ಬಂದಿತ್ತು. ಆದರೆ ನಾನು ಅದನ್ನು ತಿರಸ್ಕರಿಸಿದೆ. ಟಿಆರ್ ಪಿ ಗಾಗಿ ನನ್ನತನವನ್ನು ಮಾರಿಕೊಳ್ಳಲು ಸಿದ್ಧನಿಲ್ಲ. ಅಲ್ಲಿ ನೀಡುವ ತರಹೇವಾರಿ ಟಾಸ್ಕ್ ಗಳನ್ನು ನಟಿಸಲು ಸಿದ್ಧನಿಲ್ಲ. ಹಣದ ಆಸೆಗಾಗಿ ಇತರರನ್ನು ಹೀಯಾಳಿಸುವ ಮಟ್ಟಕ್ಕೆ ನಾನಿನ್ನೂ ಇಳಿದಿಲ್ಲ.












Click it and Unblock the Notifications