Pratap Simha: ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ದೆ ಮಕ್ಕಳನ್ನ ಹುಟ್ಟಿಸ್ತಾರೆ
ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರತಾಪ್ ಸಿಂಹ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪುರುಸೊತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಿದ್ದಾರೆ ಅನ್ನೋದು ಪ್ರಚೋದನಾಕಾರಿ ಭಾಷಣನಾ? ಎಂದು ಪ್ರತಾಪ್ ಸಿಂಹ ಕೇಳಿದ್ದಾರೆ.
ಸತ್ಯ ಹೇಳೋದು ಪ್ರಚೋದನೆಯಾಗುತ್ತಾ? ನಿಮ್ಮ ಶಕ್ತಿಯಾನುಸಾರ ಮಕ್ಕಳು ಹುಟ್ಟಿಸಿ, ಶಿಕ್ಷಣ ಕೊಡಿಸಿದರೆ ಕಲ್ಲುಹೊಡೆಯುವುದು ನಿಲ್ಲುತ್ತೆ ಅನ್ನೋದು ತಪ್ಪಾ? ಎಂದು ಗುಡುಗಿದ್ದಾರೆ. ಉದಯಗಿರಿ ಪೊಲೀಸ್ ಠಾಣೆ ಬಳಿ ನಡೆದಿದ್ದ ಗಲಭೆ ಉಲ್ಲೇಖಿಸಿ ಪ್ರತಾಪ್ ಸಿಂಹ ಮಾತನಾಡಿದ್ದರು. ಹಾಗಾಗಿ ಪ್ರತಾಪ್ ಸಿಂಹ ಅವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಉದಯಗಿರಿ ಗಲಭೆ ಬಗ್ಗೆ ನಾನು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ ಹೊರತು ಪ್ರಚೋದನೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಬ್ಬ ಮುಸ್ಲಿಂ ಮುಲ್ಲಾ ಪ್ರಚೋದನೆ ಮಾಡಿದ್ದರೂ ಯಾಕೆ ಬಂಧಿಸಿಲ್ಲ ಎಂದು ಕೇಳಿದ್ದೇನೆ. ಮುಸ್ಲಿಮರು ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟಿಸುತ್ತಾರೆ ಎಂದಿರುವುದು ಪ್ರಚೋದನೆ ಹೇಗಾಗುತ್ತೆ? ಮುಸ್ಲಿಂ ಸಮುದಾಯದ ಕೆಲ ಪುಂಡರು ಪೊಲೀಸರ ಮೇಲೆ ದಾಳಿ ಮಾಡಿದ್ದರು. ಈ ಘಟನೆ ಬಳಿಕ ನಾನು ಪೊಲೀಸರನ್ನು ಭೇಟಿಯಾಗಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೆ. ಇದೆಲ್ಲ ಪ್ರಚೋದನೆ ನೀಡಿದಂತೆಯೇ? ಎಂದು ಕೇಳಿದ್ದಾರೆ.
ಮುಸ್ಲಿಮರು ಬಿಡುವಿಲ್ಲದೆ ಮಕ್ಕಳು ಹುಟ್ಟಿಸುತ್ತಾರೆ ಎಂದಿದ್ದೇನೆ. ಇದು ಪ್ರಚೋದನೆ ಕೊಟ್ಟಂತೆಯೇ? ಮುಸ್ಲಿಮರ ಜನಸಂಖ್ಯೆ ನೋಡಿದ್ರೇನೆ ತಿಳಿಯುತ್ತೆ. ನಿಮ್ಮ ಮನೆಯಲ್ಲಿ ಕೇವಲ ಒಂದು ಅಥವಾ ಎರಡೇ ಮಕ್ಕಳಿರೋ ಮಂದಿ ಎಷ್ಟು ಜನ ಇದ್ದಾರೆ ಹೇಳಿ? ನಾನು ಇರುವ ಸತ್ಯವನ್ನೇ ಹೇಳಿದ್ದೇನೆ ಎಂದು ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ನಟ ಶಾರುಖ್ ಖಾನ್‌ಗೆ ಮೂರು ಮಕ್ಕಳಿದ್ದಾರೆ, ಸೈಫ್ ಅಲಿ ಖಾನ್‌ಗೂ ನಾಲ್ಕು ಮಕ್ಕಳಿದ್ದಾರೆ, ನಿಮ್ಮ ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ಲದೆ ಮಕ್ಕಳು ಹುಟ್ಟಿಸುತ್ತಿದ್ದಾರೆ. ಹಾಗಾಗಿ ನೀವು ಜನೋತ್ಪಾದನೆಯಲ್ಲಿ ತೊಡಗಿದ್ದೀರಿ ಎಂದು ಹೇಳಿದೆ. ಮುಸ್ಲಿಮರು ತಮ್ಮ ಮಕ್ಕಳನ್ನು ದೇವರು ಕೊಟ್ಟ ದೇವರು ಕೊಟ್ಟ ಎನ್ನುವುದಾದರೆ, ದೇವರೇ ಎಲ್ಲವನ್ನೂ ನೋಡಿಕೊಳ್ಳಲಿ. ಸರ್ಕಾರ ಯಾಕೆ ನಿಮ್ಮನ್ನು ನೋಡ್ಕೋಬೇಕು? ಎಂದಿದ್ದಾರೆ.

ತೆರಿಗೆ ಪಾವತಿಯಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಸೌಲಭ್ಯಗಳೆಲ್ಲ ನಿಮಗೆ ಸಿಗುತ್ತಿದೆ. ಈ ರೀತಿ ಸಂಖ್ಯಾಬಲವನ್ನು ಜಾಸ್ತಿ ಮಾಡಿ ಎಲ್ಲ ಕಡೆ ತೊಂದರೆಗಳನ್ನು ನೀಡುತ್ತಿದ್ದೀರಿ. ನೀವು ಭಯದ ವಾತಾವರಣ ಸೃಷ್ಟಿಸುತ್ತಿದ್ದೀರಿ ಎಂದು ಹೇಳಿದೆ. ಇದೂ ಕೂಡ ಹೇಗೆ ಪ್ರಚೋದನಕಾರಿಯಾಗುತ್ತೆ? ಎಂದು ಕೇಳಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ನನ್ನ ವಿರುದ್ಧ ಸಾಕಷ್ಟು ಎಫ್‌ಐಆರ್ ದಾಖಲಿಸಿದ್ದಾರೆ. ಈಗ ಉದಯಗಿರಿ ಠಾಣೆಯಲ್ಲೂ ಆಗಿದೆ. ನಾನು ಮನೆಯಿಂದ ಹೊರಬಾರದು, ನನ್ನ ಆತ್ಮಸ್ಥೈರ್ಯ ಕುಗ್ಗಿಸಬೇಕು ಎಂದು ನನ್ನ ಮೇಲೆ ಸಾಲು ಸಾಲು ಎಫ್‌ಐಆರ್ ದಾಖಲಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ದೂರಿದ್ದಾರೆ.












Click it and Unblock the Notifications