ಮೈಸೂರು; ಬ್ಲ್ಯಾಕ್ ಫಂಗಸ್‌ಗೆ ಇಬ್ಬರು ಕೋವಿಡ್ ವಾರಿಯರ್ಸ್ ಬಲಿ
ಮೈಸೂರು, ಮೇ 19; ಕೋವಿಡ್ ಸೋಂಕಿನಿಂದ ಗುಣಮುಖರಾದ ಅನೇಕರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಮೈಸೂರಿನಲ್ಲಿ ಇಬ್ಬರು ಕೋವಿಡ್ ವಾರಿಯರ್‌ಗಳು ಬ್ಲ್ಯಾಕ್ ಫಂಗಸ್‌ಗೆ ಬಲಿಯಾಗಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ಬ್ಲ್ಯಾಕ್ ಫಂಗಸ್ ಭಯ ಶುರುವಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿಗಳು ಇದರಿಂದಾಗಿ ಸಾವನ್ನಪ್ಪಿದ್ದಾರೆ.
ಪಾಲಿಕೆ ಗುತ್ತಿಗೆ ನೌಕರರಾದ ವಿನೋದ್ (28) ಹಾಗೂ ರವಿ (38) ಮೃತಪಟ್ಟವರು. ಕೊರೊನಾ ಸೋಂಕಿತರ ಶವ ಸಾಗಿಸುತ್ತಿದ್ದ ಚಾಲಕ ರವಿಗೆ 16 ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಳಿಕ ಅವರಿಗೆ ಬ್ಲ್ಯಾಕ್ ಫಂಗಸ್ ತಗುಲಿದ್ದು, ಶಸ್ತ್ರಚಿಕಿತ್ಸೆ ಸಹ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಫಾಗಿಂಗ್ ಆಟೋ ಚಾಲಕನಾಗಿದ್ದ ವಿನೋದ್‌ಗೆ ಮೂರು ದಿನದ ಹಿಂದೆ ಸೋಂಕು ದೃಢಪಟ್ಟಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮನೆ-ಮನೆ ಸಮೀಕ್ಷೆ ಆರಂಭ; ಮೈಸೂರು ನಗರದಲ್ಲಿ ಕೊರೊನಾ ಸೋಂಕು ಆತಂಕ ಮೂಡಿಸಿದೆ. ಸೋಂಕು ನಿಯಂತ್ರಿಸಲು ಮೈಸೂರು ಮಹಾನಗರಪಾಲಿಕೆ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕೊರೊನಾ ಸೋಂಕಿತರ ಪ್ರಾಥಮಿಕ ಹಂತದ ಪತ್ತೆಗಾಗಿ ಬುಧವಾರದಿಂದ ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದೆ.
ಸಮೀಕ್ಷೆ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡುವ ಪಾಲಿಕೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರ ತಂಡ, ಪ್ರತಿ ಮನೆಗೂ ಭೇಟಿ ನೀಡಿ, ಆಕ್ಸಿಮೀಟರ್ ಮೂಲಕ ಆಕ್ಸಿಜನ್ ಪ್ರಮಾಣ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮೂಲಕ ದೇಹದ ತಪಮಾನವನ್ನು ಪರೀಕ್ಷಿಸಲಿದೆ.
ಒಂದು ವೇಳೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ ಕೋವಿಡ್ ಮಿತ್ರ ಕೇಂದ್ರಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲು ಅನುಕೂಲ ಮಾಡಿಕೊಡಲಾಗುತ್ತದೆ.












Click it and Unblock the Notifications