MUDA: ಹಾವೇರಿ ವಿವಿ ಕುಲಸಚಿವರಾಗಿ ಮುಡಾ ಮಾಜಿ ಆಯುಕ್ತರ ನೇಮಕ; ಬಿಜೆಪಿ ಪ್ರತಿಭಟನೆ
ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ತನಿಖೆ ನಡೆಯುತ್ತಿದ್ದರೂ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅವರ ನೇಮಕ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ. ಅಧಿಕಾರಿಗಳು ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳಬೇಕು, ಆದರೆ ಆರೋಪ ಕೇಳಿ ಬಂದಾಗಲೂ ಈ ರೀತಿ ನೇಮಕ ಮಾಡಿದ್ದೇಕೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀವತ್ಸ, ಸರಕಾರ ಅಧಿಕಾರಿಗಳ ರಕ್ಷಣೆಗೆ ಯಾಕೆ ನಿಂತಿದೆ ಎಂಬುದೇ ತಿಳಿಯುತ್ತಿಲ್ಲ. ನೀವೇನಾದರೂ ಮಾಡಿಕೊಳ್ಳಿ, ನಮಗೆ ಕಮಿಷನ್ ಬಂದರೆ ಸಾಕು ಎಂಬ ಮನಸ್ಥಿತಿಯಲ್ಲಿ ಸರಕಾರ ಇದೆ. ಸಿದ್ದರಾಮಯ್ಯ ಅವರು ಅಧಿಕಾರಿಗಳು ತಪ್ಪು ಮಾಡಿದರೆ ಆ ಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದರು. ಆದರೆ, ಮುಡಾ ಪ್ರಕರಣದಲ್ಲಿ ಈ ರೀತಿ ನಿರ್ಧಾರ ಯಾಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಎಂಬ ಸುದ್ದಿ ಬಹಿರಂಗವಾಗುತ್ತಿದ್ದಂತೆ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿದ ರಾಜ್ಯ ಸರಕಾರ, ಮುಡಾ ಹಗರಣದಲ್ಲಿ ಮಾತ್ರ ಏಕೆ ಅಧಿಕಾರಿಗಳನ್ನು ರಕ್ಷಿಸುತ್ತಿದೆ. ಯಾವ ಅಧಿಕಾರಿಗಳ ಮೇಲೂ ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.
ಲಕ್ಷ್ಮಿಪುರಂ ಠಾಣೆಯಲ್ಲಿ ದೂರು
ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಹಾಗೂ ಜಿ.ಟಿ.ದಿನೇಶ್ ಕುಮಾರ್ ಅವರು ಸರಕಾರಕ್ಕೆ 5 ಸಾವಿರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಇವರಿಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶುಕ್ರವಾರ ವಕೀಲ ಅರುಣ್‌ಕುಮಾರ್ ಲಕ್ಷ್ಮಿಪುರಂ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ಹಾವೇರಿ ವಿವಿಗೆ ಕುಲಸಚಿವರನ್ನಾಗಿ ನೇಮಕ
ಮುಡಾ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಸರಕಾರ ಸ್ಥಳ ತೋರಿಸದೆ ವರ್ಗಾವಣೆ ಮಾಡಿತ್ತು. ಸ್ಥಳ ನಿರೀಕ್ಷೆಯಲ್ಲಿದ್ದ ದಿನೇಶ್ ಕುಮಾರ್ ಅವರನ್ನು ಇದೀಗ ಸರಕಾರ ಹಾವೇರಿ ವಿವಿ ಕುಲಸಚಿವರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಬಿಜೆಪಿ ಆಕ್ರೋಶ ಹೊರಹಾಕಿದೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ವಿಪಕ್ಷಗಳಿಗೆ ಇದೊಂದು ರಾಜಕೀಯ ಅಸ್ತ್ರವಾಗಿದೆ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಬಿಜೆಪಿ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದು, ಇದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.












Click it and Unblock the Notifications