ಕೇಂದ್ರದಲ್ಲಿ ಸಚಿವ ಸ್ಥಾನ: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದೇನು?
ಮೈಸೂರು, ಜೂನ್ 03: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೂ ನಮಗೆ ಕೇಂದ್ರ ಸಚಿವ ಸ್ಥಾನದಲ್ಲಿ ಯಾವುದೇ ಆಕಾಂಕ್ಷೆ ಇಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆ ಪ್ರಕಾರ ಇಡೀ ಭಾರತದಲ್ಲಿ ಫಲಿತಾಂಶ ನಮ್ಮ ಬಿಜೆಪಿ ಹಾಗೂ ಎನ್‌ಡಿಎ ಒಕ್ಕೂಟ ಪರ ಬರುತ್ತಿದೆ ಎನ್ನುವ ಮಾಹಿತಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಪ್ರಧಾನ ಮಂತ್ರಿ ಹಾಗೂ ಭಾರತೀಯ ಜನತಾ ಪಾರ್ಟಿ ಕಳೆದ ಹತ್ತು ವರ್ಷದಿಂದ ಒಳ್ಳೆಯ ಆಡಳಿತ ನೀಡಿದ್ದಾರೆ. ಜೊತೆಗೆ ಬಲಿಷ್ಠವಾದ ಆರ್ಥಿಕತೆಯನ್ನು ರೂಪಿಸಿದರು. ಒಳ್ಳೆಯ ಸಮಾಜ ಸೇವೆಯನ್ನು ಮಾಡಿದ್ದಾರೆ. ಇದನ್ನೆಲ್ಲಾ ಗುರುತಿಸಿ ಜನರು ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ಪ್ರಕಾರ ಈ ವಿಚಾರ ಎಲ್ಲಿರಿಗೂ ಗೊತ್ತಾಗಿದೆ. ಇದು ಬಹಳ ಖುಷಿಯ ವಿಚಾರ. ಈ ಬಾರಿ ಇನ್ನೂ ಐದು ವರ್ಷ ಸಮಾಜ ಸೇವೆ ಮಾಡಲು ಮತ್ತು ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಲು ಜನ ಅವಕಾಶ ನೀಡಿದ್ದಾರೆ ಎನ್ನುವ ವಿಶ್ವಾಸ ನಮಗೆ ಬರುತ್ತಿದೆ. ಹೀಗಾಗಿ ಕೆಲಸ ಎಲ್ಲಾ ಆರಂಭಿಸಲು ನಾವು ಸಿದ್ಧರಾಗಿದ್ದೇವೆ.
ರಾಜ್ಯದಲ್ಲಿ ನಾವು ನಿರೀಕ್ಷೆ ಮಾಡಿದಷ್ಟೇ ಕ್ಷೇತ್ರಗಳು ಚುನಾವಣೋತ್ತರ ಸಮೀಕ್ಷೆಯಲ್ಲಿ ಬಂದಿದೆ. ಫಲಿತಾಂಶದಲ್ಲಿಯೂ ಅಷ್ಟೇ ಬರುತ್ತದೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೊದಲಿನಿಂದಲೂ ವಿಶ್ವಾಸ ಇತ್ತು. ಈಗಲೂ ವಿಶ್ವಾಸ ಇದೆ. ಚುನಾವಣೋತ್ತರ ಸಮೀಕ್ಷೆ ಅದಕ್ಕೂ ಕೂಡ ಸಾಕ್ಷಿಯಾಗಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದು ಮೈಸೂರಿನಿಂದ ಯದುವೀರ್ ಒಡೆಯರ್ ಅವರಿಗೆ ಕ್ಷೇಂದ್ರ ಸಚಿವ ಸ್ಥಾನ ಸಿಗಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಫಲಿತಾಂಶ ನಮ್ಮ ಪರವಾಗಿ ಬರಲಿ ಎನ್ನುವುದರ ಬಗ್ಗೆ ಅಷ್ಟೇ ಗಮನ ಇದೆ. ಮುಂದೆ ಬರುವುದನ್ನು ಮತ್ತೆ ನೋಡಿಕೊಳ್ಳೋಣ. ಭವಿಷ್ಯದ್ದು ಮತ್ತೆ ಮಾತಾಡೋಣ. ಆ ಬಗ್ಗೆ ಯಾವುದೇ ಆಕಾಂಕ್ಷೆ ಇಲ್ಲ. ನಮ್ಮ ಆಕಾಂಕ್ಷೆ ಇರುವುದು ಫಲಿತಾಂಶ ನಮ್ಮ ಪರವಾಗಿ ಬರಬೇಕು ಎನ್ನುವುದು ಅಷ್ಟೇ ಎಂದು ಹೇಳಿದ್ದಾರೆ.












Click it and Unblock the Notifications