ಹುಟ್ಟುಹಬ್ಬದ ವಿಶೇಷ; ಸಿದ್ದರಾಮಯ್ಯ ಬಿಚ್ಚಿಟ್ಟ ಜನ್ಮ ರಹಸ್ಯ!

ಮೈಸೂರು, ಆಗಸ್ಟ್ 11; ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ, ಹಿಂದುಳಿದ ವರ್ಗದ ನಾಯಕ, ನಿಷ್ಠೂರವಾದಿ, ನೇರ ನಡೆನುಡಿಯ ಸಿದ್ದರಾಮಯ್ಯ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಆಗಸ್ಟ್ 12ರಂದು ಆಚರಣೆ ಮಾಡಲು ಸಿದ್ಧತೆ ನಡೆಸುತ್ತಿರುವಾಗಲೇ ಸ್ವತಃ ಸಿದ್ದರಾಮಯ್ಯ ತಮ್ಮ ಜನ್ಮರಹಸ್ಯವನ್ನು ಬಿಚ್ಚಿಟ್ಟು ಬೆಂಬಲಿಗರು, ಅಭಿಮಾನಿಗಳು ಅಚ್ಚರಿ ಮೂಡುವಂತೆ ಮಾಡಿದ್ದಾರೆ.

ಇಷ್ಟಕ್ಕೂ ಸಿದ್ದರಾಮಯ್ಯ ಜನ್ಮದಿನಾಂಕದ ಬಗ್ಗೆ ಗೊಂದಲ ಹಿಂದಿನಿಂದಲೂ ಇತ್ತು. ಈ ಬಗ್ಗೆ ಅವರೇ ಹಲವು ವೇದಿಕೆಗಳಲ್ಲಿ ಹೇಳಿದ್ದರು. ಆದರೂ ಶಾಲೆಯಲ್ಲಿ ನಮೂದಾಗಿರುವ ಪ್ರಕಾರ ಆಗಸ್ಟ್ 12ರಂದೇ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಾ ಬಂದಿದ್ದಾರೆ.

ಹಾಗೆ ನೋಡಿದರೆ ಸಿದ್ದರಾಮಯ್ಯಗೆ ಹುಟ್ಟು ಆಚರಿಸಿಕೊಳ್ಳುವುದರಲ್ಲಿ ಆಸಕ್ತಿಯಿಲ್ಲ. ಆದರೂ ತಮ್ಮ ಊರುಗಳಲ್ಲಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಇದೀಗ ನನ್ನ ಜನ್ಮ ದಿನಾಂಕ ಆಗಸ್ಟ್ 12,1947 ಅಲ್ಲ ಆಗಸ್ಟ್ 3, 1947ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದಾಗಿ ಹುಟ್ಟು ಹಬ್ಬದ ಆಚರಣೆ ಸಂಭ್ರಮದಲ್ಲಿದ್ದವರು ಗೊಂದಲಕ್ಕೆ ಬಿದ್ದಿದ್ದಾರೆ.

ಸಿದ್ದರಾಮಯ್ಯ ಹುಟ್ಟು, ಶಿಕ್ಷಣದ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ರೋಚಕತೆ ಎದ್ದು ಕಾಣುತ್ತದೆ. ಕುರಿ ಮೇಯಿಸುತ್ತಿದ್ದ ಹುಡುಗನೊಬ್ಬ ಓದಿನ ಬಗ್ಗೆ ತೋರಿದ ಆಸಕ್ತಿ ಮತ್ತು ನಂತರ ಸಮಾಜ ಸೇವೆಯಲ್ಲಿ ಆಸಕ್ತಿ ಇವತ್ತು ರಾಜ್ಯದಲ್ಲಿ ಮಹಾನಾಯಕನಾಗಿ ಬೆಳೆಯುವಂತೆ ಮಾಡಿತು ಎನ್ನುವುದನ್ನು ನಾವು ಒಪ್ಪಿಕೊಳ್ಳ ಬೇಕಾಗುತ್ತದೆ. ಅವರ ಬದುಕಿನ ಹಾದಿ ಅದೆಷ್ಟೋ ಮಂದಿಗೆ ಸ್ಫೂರ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಹೀಗೆ 74 ವರ್ಷಗಳ ಜೀವನದ ಹಾದಿಯನ್ನು ನೋಡುತ್ತಾ ಹೋದರೆ ಕುತೂಹಲಕಾರಿ ವಿಚಾರಗಳು ಹೊರಹೊಮ್ಮುತ್ತಲೇ ಹೋಗುತ್ತದೆ.

ಕುರಿಮೇಯಿಸುತ್ತಾ ಅಕ್ಷರ ಕಲಿತರು

ಕುರಿಮೇಯಿಸುತ್ತಾ ಅಕ್ಷರ ಕಲಿತರು

ಮೈಸೂರು ಬಳಿಯ ಸಿದ್ದರಾಮನಹುಂಡಿಯ ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಗಳು ಪುತ್ರರಾಗಿ ಜನಿಸಿದ ಸಿದ್ದರಾಮಯ್ಯ ಶಾಲೆಗೆ ಸೇರಬೇಕಾದ ವಯಸ್ಸಿನಲ್ಲಿ ಆಟವಾಡುತ್ತಾ ಕುರಿಮೇಯಿಸುತ್ತಾ ಕಾಲ ಕಳೆದಿದ್ದರು. ಶಾಲೆಯ ಮುಖ ನೋಡದ ಬಾಲಕ ಸಿದ್ದರಾಮಯ್ಯ ಓದುವ ಛಲ ಹೊಂದಿದ್ದರು. ಹಾಗಾಗಿ ಶಾಲೆಗೆ ಹೋಗದಿದ್ದರೂ ಮರಳಿನ ಮೇಲೆ ಅ, ಆ, ಇ, ಈ ಬರೆಯುವುದನ್ನು ಕಲಿತರು. ಬಾಲಕನ ಈ ಆಸಕ್ತಿಯನ್ನು ನೋಡಿದ ನಂಜೇಗೌಡ ಎಂಬುವರು ವಯಸ್ಸಿಗೆ ಅನುಗುಣವಾಗಿ 1957ರಲ್ಲಿ ಐದನೇ ಕ್ಲಾಸಿಗೆ ಸೇರಿಸಿದರು ಈ ವೇಳೆ ರಾಜಪ್ಪ ಮೇಷ್ಟ್ರು ಅವರ ಅಪ್ಪನನ್ನು ಹುಟ್ಟಿದ ದಿನಾಂಕ ಕೇಳಿದ್ದರು. ಈ ವೇಳೆ ಅವರು ನನಗೆ ಗೊತ್ತಿಲ್ಲ ಎಂದಿದ್ದರು ಹೀಗಾಗಿ ಮೇಷ್ಟ್ರು 12-08-1947 ಎಂದು ಬರೆದುಕೊಂಡಿದ್ದಾರೆ. (ಅದು ಆಗಸ್ಟ್ 3 ಎಂದಾಗಬೇಕಿತ್ತು ಎಂಬುದು ಸಿದ್ದರಾಮಯ್ಯ ಈಗಿನ ಹೇಳಿಕೆ)

ನೇರವಾಗಿ 5ನೇ ತರಗತಿಗೆ ದಾಖಲು

ನೇರವಾಗಿ 5ನೇ ತರಗತಿಗೆ ದಾಖಲು

5ನೇ ತರಗತಿ ಮೂಲಕ ಶಾಲೆಗೆ ಸೇರಿದ ಸಿದ್ದರಾಮಯ್ಯ ಓದಿನಲ್ಲಿ ಮುಂದಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲ್‌ಗೆ ಮೈಸೂರಿಗೆ ಬಂದ ಅವರು ವಿದ್ಯಾವರ್ಧಕಕ್ಕೆ ಸೇರಿದರು. 1964ರಲ್ಲಿ ಎಸ್‌. ಎಸ್‌. ಎಲ್‌. ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಅವರು ಪಿಯುಸಿ ಮತ್ತು ಬಿಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಮುಗಿಸಿ ಕಾನೂನು ಪದವಿಯನ್ನು ವಿದ್ಯಾವರ್ಧಕ ಕಾಲೇಜಿನಲ್ಲಿ ಪಡೆದರು. ಅಲ್ಲದೆ ಇದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದರು.

ಇದೇ ಸಂದರ್ಭ ಅವರಿಗೆ ರೈತ ನಾಯಕ ಪ್ರೊ. ನಂಜುಂಡಸ್ವಾಮಿಯವರ ಸಂಪರ್ಕ ದೊರೆಯಿತು. ಅಲ್ಲದೆ ಜೆ. ಪಿ. ನಾರಾಯಣ್, ಲೋಹಿಯಾ, ರಾಮಸ್ವಾಮಿ ಪೆರಿಯಾರ್ ಪ್ರಭಾವಕ್ಕೊಳಗಾದ ಸಿದ್ದರಾಮಯ್ಯ ವಿದ್ಯಾರ್ಥಿ ಚಳುವಳಿ, ಜನಪರ ಹೋರಾಟಗಳಲ್ಲಿ ಭಾಗವಹಿಸತೊಡಗಿದರು. 1974ರಲ್ಲಿ ಜೆಪಿ ಚಳವಳಿ, 1975ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದರು.

1993ರಲ್ಲಿ ವಿಧಾನಸಭೆ ಪ್ರವೇಶ

1993ರಲ್ಲಿ ವಿಧಾನಸಭೆ ಪ್ರವೇಶ

ಮುಂದೆ ರಾಜಕೀಯದತ್ತ ವಾಲಿದ ಸಿದ್ದರಾಮಯ್ಯ ಮೊದಲಿಗೆ 1978ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾದರು. 1980ರಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಎಂ. ರಾಜಶೇಖರಮೂರ್ತಿ ಹಾಗೂ ಗುರುಪಾದಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡರು. 1983ರ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಚಾಮುಂಡೇಶ್ವರಿ ಕ್ಷೇತ್ರದ ಜನ ತಮ್ಮ ಹಣವನ್ನು ಖರ್ಚು ಮಾಡಿ ಓಟು ಹಾಕಿಸಿ ಗೆಲ್ಲಿಸಿ ಮೊದಲ ಬಾರಿಗೆ ವಿಧಾನಸಭೆಗೆ ಕಳುಹಿಸಿಕೊಟ್ಟರು.

ಇವರ ಹೋರಾಟದ ಮನೋಭಾವ, ನೇರ ನಡೆ ನುಡಿಯನ್ನು ಮೆಚ್ಚಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು. ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಈ ಸಂದರ್ಭ ಹಲವಾರು ಉಪಯುಕ್ತ ಕೆಲಸ ನಡೆದಿದ್ದು ಇತಿಹಾಸ. ಹೆಗಡೆಯವರ ಸಚಿವ ಸಂಪುಟದಲ್ಲಿ ರೇಷ್ಮೆಖಾತೆ ಸಚಿವರಾಗಿಯೂ ಸಿದ್ದರಾಮಯ್ಯ ಕಾರ್ಯನಿರ್ವಹಿಸಿದರು. 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯ ಹೆಗಡೆಯವರ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. ಆದರೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ರಾಜಶೇಖರಮೂರ್ತಿ ವಿರುದ್ಧ ಸೋತರು. ಆದರೆ ಧೃತಿಗೆಡದ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನವನ್ನು ಎಂದಿನಂತೆ ಮುಂದುವರೆಸಿದರು.

2004ರಲ್ಲಿ ಉಪಮುಖ್ಯಮಂತ್ರಿಯಾದರು!

2004ರಲ್ಲಿ ಉಪಮುಖ್ಯಮಂತ್ರಿಯಾದರು!

ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಪಡೆದ ಸಿದ್ದರಾಮಯ್ಯ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷದ ಸಂಘಟನೆ ಮಾಡಿದರಲ್ಲದೆ, 1994ರಲ್ಲಿ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಾಗ ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು. ಆ ನಂತರ 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಯಾದಾಗ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿತ್ತಾದರೂ ಉಪಮುಖ್ಯ ಮಂತ್ರಿಯಾಗಿದ್ದ ಜೆ. ಹೆಚ್. ಪಟೇಲ್ ಮುಖ್ಯಮಂತ್ರಿಯಾದರು. 1999ರಲ್ಲಿ ಕಾಂಗ್ರೆಸ್ ಅಲೆ ಬೀಸಿದಾಗ ಮತ್ತೆ ಚುನಾವಣೆಯಲ್ಲಿ ಎ. ಎಸ್. ಗುರುಸ್ವಾಮಿ ಮುಂದೆ ಸೋಲು ಕಂಡರು. 2004ರಲ್ಲಿ ಮತ್ತೆ ಗೆಲುವು ಸಾಧಿಸಿದ ಅವರು ಜೆಡಿಎಸ್ ಕಾಂಗ್ರೆಸ್-ಸಮ್ಮಿಶ್ರ ಸರ್ಕಾರದಲ್ಲಿ ಧರಂಸಿಂಗ್ ಮುಖ್ಯ ಮಂತ್ರಿಯಾದರೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು.

2005ರಲ್ಲಿ ಜೆಡಿಎಸ್ ಬಿಟ್ಟು ಹೊರಬಂದರು

2005ರಲ್ಲಿ ಜೆಡಿಎಸ್ ಬಿಟ್ಟು ಹೊರಬಂದರು

ಜೆಡಿಎಸ್‌ನ ರಾಜಕೀಯ ರಗಳೆಗಳಿಂದ ಬೇಸತ್ತ ಸಿದ್ದರಾಮಯ್ಯ ಆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದು 2005ರಲ್ಲಿ ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅಲ್ಲದೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅವರು ಕಾಂಗ್ರೆಸ್ ಸೇರಿದರು. 2006ರಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಾಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಅವತ್ತು ಅಸ್ತಿತ್ವದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಒಗ್ಗಟ್ಟಾಗಿ ಸಿದ್ದರಾಮಯ್ಯ ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದು ಶಿವಬಸಪ್ಪ ಎಂಬುವರನ್ನು ಕಣಕ್ಕಿಳಿಸಿ ಗೆಲ್ಲಿಸಲು ಇನ್ನಿಲ್ಲದಂತೆ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿದ್ದರಾಮಯ್ಯ ಅಲ್ಪ ಮತದಿಂದ ಗೆಲುವು ಸಾಧಿಸಿದ್ದರು. 2008ರ ಚುನಾವಣೆ ವೇಳೆಗೆ ಕ್ಷೇತ್ರ ಪುನರ್ವಿಂಗಡಣೆ ಆಗಿದ್ದರಿಂದ ವರುಣಾ ಕ್ಷೇತ್ರ ಉದಯವಾಗಿತ್ತು. ಇಲ್ಲಿಂದ ಸ್ಪರ್ಧೆ ಮಾಡಿದ ಅವರು ಗೆಲುವು ಸಾಧಿಸಿ ವಿಪಕ್ಷನಾಯಕರೂ ಆದರು.

ಮತ್ತೊಮ್ಮೆ ಸಿಎಂ ಆಗುವ ಕನಸು

ಮತ್ತೊಮ್ಮೆ ಸಿಎಂ ಆಗುವ ಕನಸು

ಮೇ 5, 2013ರ ಚುನಾವಣೆಯಲ್ಲಿ ಮತ್ತೆ ವರುಣಾದಿಂದ ಆಯ್ಕೆಯಾಗಿ ಮುಖ್ಯ ಮಂತ್ರಿ ಗದ್ದುಗೆಯನ್ನು ಅಲಂಕರಿಸಿ ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದರು. ಹಲವು ಭಾಗ್ಯಗಳನ್ನು ನೀಡಿದ್ದರೂ 2018ರ ವಿಧಾನ ಸಭಾ ಚುನಾವಣೆ ಅವರ ಪಾಲಿಗೊಂದು ಅಗ್ನಿಪರೀಕ್ಷೆಯಾಯಿತು. ವರುಣಾ ಕ್ಷೇತ್ರವನ್ನು ಮಗ ಯತೀಂದ್ರ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಜಿ. ಟಿ. ದೇವೇಗೌಡರ ವಿರುದ್ಧ ಹಾಗೆಯೇ ಬಾದಾಮಿ ಕ್ಷೇತ್ರದಿಂದ ಶ್ರೀರಾಮುಲು ವಿರುದ್ಧ ಹೀಗೆ ಎರಡು ಕಡೆಯಿಂದ ಸ್ಪರ್ಧಿಸಿದ್ದರು.

ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನ ಅವರ ಕೈಹಿಡಿಯಲಿಲ್ಲ. ಬಾದಾಮಿ ಕ್ಷೇತ್ರದ ಜನ ಕೈಹಿಡಿದರಾದರೂ ಕಾಂಗ್ರೆಸ್ ಬಹುಮತ ಪಡೆಯದ ಕಾರಣ ಮತ್ತೆ ಮುಖ್ಯ ಮಂತ್ರಿಯಾಗುವ ಕನಸು ನನಸಾಗಲಿಲ್ಲ. ಸದ್ಯ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮತ್ತೊಮ್ಮೆ ನೋಡುವ ಕಾತರದಲ್ಲಿ ಅಭಿಮಾನಿಗಳಿದ್ದಾರೆ. ಮುಂದೆ ಏನಾಗುತ್ತದೆ? ಎಂಬುದನ್ನು ಕಾಲವೇ ಹೇಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+