ಎಟಿಎಂ ಕಾರ್ಡ್ ಬಳಸಿ ಲಕ್ಷಾಂತರ ಕಬಳಿಸಿದ ಖದೀಮರ ಬಂಧನ
ಹುಣಸೂರು, ಜ. 21 : ಮಾಲಿಕರಿಗೆ ತಲುಪದ ಎಟಿಎಂ ಕಾರ್ಡನ್ನು ದುರುಪಯೋಗಪಡಿಸಿಕೊಂಡು, ವಿದೇಶದಲ್ಲಿರುವ ಮಹಿಳೆಯ ಬ್ಯಾಂಕ್ ಖಾತೆಯಿಂದ 6.9 ಲಕ್ಷ ರು. ಡ್ರಾ ಮಾಡಿಕೊಂಡಿದ್ದ ಬ್ಯಾಂಕಿನ ಉದ್ಯೋಗಿ ಮತ್ತೋರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರುತು ಸಿಗದಿರಲಿ ಎಂದು ಹೆಲ್ಮೆಟ್ ಧರಿಸಿ ಎಂಟಿಎಂನಿಂದ ಹಣ ಲಪಟಾಯಿಸಿದ ಬ್ಯಾಂಕಿನ ಉದ್ಯೋಗಿ ಮಹದೇವಸ್ವಾಮಿ ಅಲಿಯಾಸ್ ಚಿಕ್ಕಮಾದಯ್ಯ (40) ಮತ್ತು ಮಹದೇವ ಅಲಿಯಾಸ್ ಬಸವಯ್ಯ (38) ಎಂಬಿಬ್ಬರನ್ನು ಹುಣಸೂರು ಪೊಲೀಸರು ಬಂಧಿಸಿ, ಅವರಿಂದ ಎಟಿಎಂ ಕಾರ್ಡ್ ಮತ್ತು ಹಣ ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ : ಹುಣಸೂರು ತಾಲ್ಲೂಕು ಪಕ್ಷಿರಾಜಪುರ ಗ್ರಾಮದ ರೂಪಾ ಎಂಬುವವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಹುಣಸೂರು ಪಟ್ಟಣದ ಎಸ್.ಬಿ.ಐ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. 2015ರ ಜನವರಿ ತಿಂಗಳಿನಲ್ಲಿ ಭಾರತಕ್ಕೆ ವಾಪಸ್ ಬಂದು ಬ್ಯಾಂಕಿನ ಖಾತೆಯನ್ನು ಪರಿಶೀಲಿಸಿದಾಗ, ಖಾತೆಯಲ್ಲಿದ್ದ ಹಣದ ಪೈಕಿ 6,96,000/- ರೂ ಹಣವನ್ನು ಯಾರೋ ಡ್ರಾ ಮಾಡಿರುವ ಬಗ್ಗೆ ಬ್ಯಾಂಕಿಗೆ ದೂರು ನೀಡಿದ್ದರು.

ಬ್ಯಾಂಕಿನ ಅಧಿಕಾರಿಗಳು ಎಟಿಎಂ ದಾಖಲೆಗಳನ್ನು ಪರಿಶೀಲಿಸಿದಾಗ ಹಣವನ್ನು ಯಾರೋ ಹಿಂತೆಗೆದುಕೊಂಡಿರುವುದು ಗಮನಕ್ಕೆ ಬಂದಿತು. ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಕೈಗೊಳ್ಳಲಾಗಿತ್ತು. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]
ಆರೋಪಿಗಳ ಪತ್ತೆಗಾಗಿ ಅಭಿನವ್ ಖರೆ, ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆರವರ ಮಾರ್ಗದರ್ಶನದಲ್ಲಿ ಜಯರಾಂ, ಡಿ.ಎಸ್.ಪಿ. ಹುಣಸೂರು ಉಪವಿಭಾಗರವರ ನೇತೃತ್ವದಲ್ಲಿ ಧರ್ಮೇಂದ್ರ- ಹುಣಸೂರು ವೃತ್ತ, ಶಿವಸ್ವಾಮಿ - ಸಿ.ಪಿ.ಐ. ಎಚ್.ಡಿ.ಕೋಟೆ ವೃತ್ತ ಮತ್ತು ಲವ - ಪಿ.ಎಸ್.ಐ. ಹುಣಸೂರು ಪಟ್ಟಣ ಠಾಣೆ ರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಜಯರಾಂ ನೇತೃತ್ವದ ತಂಡ ಎಂಟಿಎಂ ಸಿಸಿಟಿವಿ ಕ್ಯಾಮೆರಾ ವಿಡಿಯೋವನ್ನು ವೀಕ್ಷಿಸಿದಾಗ ಆರೋಪಿಗಳ ಕರಾಮತ್ತು ಬೆಳಕಿಗೆ ಬಂದಿದೆ. ಅದರ ಪ್ರಕಾರ ಆರೋಪಿಗಳಾದ ಪಿರಿಯಾಪಟ್ಟಣದ ಮಹದೇವಸ್ವಾಮಿ ಮತ್ತು ಮಲ್ಲಿನಾಥಪುರ ಗ್ರಾಮದ ಮಹದೇವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಎಲ್ಲ ಸಂಗತಿಗಳನ್ನು ಅವರು ಬಾಯಿಬಿಟ್ಟಿದ್ದಾರೆ.
ನಡೆದದ್ದೇನೆಂದರೆ, ರೂಪಾ ಅವರು 2013ನೇ ಆಗಸ್ಟ್ ತಿಂಗಳಿನಲ್ಲಿ ಹೊಸ ಎಟಿಎಂ ಕಾರ್ಡಿಗೆ ಅರ್ಜಿ ಸಲ್ಲಿಸಿ ವಿದೇಶಕ್ಕೆ ಹೋಗಿದ್ದರು. ಎಟಿಎಂ ಕಾರ್ಡ್ ಅವರ ವಿಳಾಸಕ್ಕೆ ಹೋಗಿ ವಾಪಸ್ ಬ್ಯಾಂಕಿಗೆ ಬಂದಿತ್ತು. ಎಟಿಎಂ ಕಾರ್ಡ್ ಮತ್ತು ಪಿನ್ ನಂಬರನ್ನು ಅದೇ ಬ್ಯಾಂಕಿನಲ್ಲಿ ಡಿ ಗ್ರೂಪ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಸ್ವಾಮಿ ಎಂಬುವವನು, ಮಹದೇವ ಎಂಬುವವನನ್ನು ಬಳಸಿಕೊಂಡು ಆತನ ಚಹರೆ ಕಾಣದಂತೆ ತಲೆಗೆ ಹೆಲ್ಮೆಟ್ ಧರಿಸಿ 6.9 ಲಕ್ಷ ರು. ಹಣವನ್ನು ಡ್ರಾ ಮಾಡಿದ್ದ.
ಕೃತ್ಯಕ್ಕೆ ಉಪಯೋಗಿಸಿದ ಎಟಿಎಂ ಕಾರ್ಡ್ ಹಾಗು 95 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಎಲ್ಲ ಪೊಲೀಸ್ ಸಿಬ್ಬಂದಿಗಳನ್ನು ಅಭಿನವ್ ಖರೆ ಅಭಿನಂದಿಸಿದ್ದು, ಅವರಿಗೆ ಬಹುಮಾನ ಘೋಷಿಸಿದ್ದಾರೆ.











Click it and Unblock the Notifications