ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ನಾಟಕೋತ್ಸವ ಸಂಭ್ರಮ: ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ
ಮೈಸೂರು, ಮಾರ್ಚ್ 06: ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಮಾ.6 ರಿಂದ 11ರವರೆಗೆ ನಡೆಯಲಿರುವ ನಾಟಕೋತ್ಸವದೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಇವ ನಮ್ಮವ, ಇವ ನಮ್ಮವ ಎಂಬ ಪರಿಕಲ್ಪನೆಯು ಬಹುರೂಪಿಯ ಈ ಬಾರಿಯ ವಿಶೇಷತೆಯಾಗಿದೆ.
ಇನ್ನು ಬಹುರೂಪಿ ನಾಟಕೋತ್ಸವದಲ್ಲಿ ಏನೇನು ನಾಟಕಗಳು ನಡೆಯಲಿವೆ ಎಂಬುದನ್ನು ನೋಡುವುದಾದರೆ, ಮಾ.7 ರಂದು ಮುಟ್ಟಿಸಿಕೊಂಡವನು (ಕನ್ನಡ), ಲೋಕದ ಒಳಹೊರಗೆ (ಕನ್ನಡ), ಶಿಶುನಾಳ ಶರೀಫ್ (ಕನ್ನಡ), ಮಾ.8ರಂದು ದುಖ್ವಾ ಮೇ ಬೀತಲ್ ರತಿಯಾ (ಹಿಂದಿ), ದ್ರೋಪದಿ ಹೇಳ್ತವ್ಳೆ (ಕನ್ನಡ), ಕಲ್ಯಾಣದ ಬಾಗಿಲು (ಕನ್ನಡ), ಸೀತೆಯ ವ್ಯಥೆ (ಕನ್ನಡ) ಪ್ರದರ್ಶನಗೊಳ್ಳಲಿದೆ.

ಮಾ.9ರಂದು ಜಂಪ್ (ಹಿಂದಿ), ಗ್ಲಾನಿ (ಕನ್ನಡ), ಚಾವುಂಡರಾಯ (ಕನ್ನಡ), ಖಟಾರ (ಮರಾಠಿ), ಮಾ.10 ರಂದು ಕಿಟನ್ ಕೋಲಾ (ಬಂಗಾಳಿ), ಬ್ಲಾöಕ್ ಔಟ್(ಕನ್ನಡ), ಚಿಲ್ಲರ ಸಮರಂ (ಮಲಯಾಳಂ), ಕರಿಯದೇವರ ಹುಡುಕಿ (ಕನ್ನಡ), ಮಾ.11 ರಂದು ಅಬೊರಿಜಿನಲ್ ಕ್ರೈಂ (ಮಣಿಪುರಿ), ಪಾರ್ಶ್ವಸಂಗೀತ (ಕನ್ನಡ), ಕಥೆ ಎಡ್ಡೇಂಡು (ತುಳು) ಹಾಗೂ ಬೆರಳ್ಗೆ ಕೊರಳ್ (ಕನ್ನಡ) ನಾಟಕಗಳು ಪ್ರದರ್ಶನವಾಗಲಿವೆ.
ವಿವಿಧ ಕಾರ್ಯಕ್ರಮ, ಪ್ರದರ್ಶನ
ಇದರ ಜತೆಗೆ ಕೇವಲ ನಾಟಕ ಮಾತ್ರವಲ್ಲದೆ, ಜಾನಪದ ಕಾರ್ಯಕ್ರಮ ಹಾಗೂ ಚಲನಚಿತ್ರ ಪ್ರದರ್ಶನವೂ ಈ ವೇಳೆ ನಡೆಯಲಿದೆ ಜತೆಗೆ ಜಾನಪದ ಸಂಭ್ರಮ, ಚಲನಚಿತ್ರೋತ್ಸವ, ಪುಸ್ತಕ ಮೇಳ, ಕರಕುಶಕಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ, ವಚನಾಂತರಂಗ ಹೀಗೆ ಹಲವಾರು ಕಾರ್ಯಕ್ರಮಗಳು ಮೆರುಗು ತರಲಿದೆ.

60 ಮಳಿಗೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅದರಂತೆ ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ 60 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ದೇಸಿ ಆಹಾರಕ್ಕಾಗಿ 11ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದೆ. 18 ಮಳಿಗೆಗಳು ಪುಸ್ತಕ ಮಾರಾಟಕ್ಕೆ ಇನ್ನುಳಿದ ಮಳಿಗೆಗಳಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ.
ಕಾಯಕ ಮನೆ ಹೆಸರಿನಲ್ಲಿ ಪ್ರಾತ್ಯಕ್ಷಿಕೆ
ಜಾನಪದ ಸಂಭ್ರಮವು ರಂಗಾಯಣದ ಕಿಂದರಿಜೋಗಿ ಆವರಣ, ಚಲನಚಿತ್ರೋತ್ಸವಕ್ಕೆ ಶ್ರೀರಂಗ ಮಂದಿರ ಹಾಗೂ ನಾಟಕ ಪ್ರದರ್ಶನಕ್ಕೆ ವನರಂಗ, ಕಿರುರಂಗಮಂದಿರ, ಭೂಮಿಗೀತ, ಕಲಾಮಂದಿರ ವೇದಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಚಾರ ಸಂಕಿರಣಕ್ಕೆ ಬಿ.ವಿ.ಕಾರಂತ ರಂಗಚಾವಡಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಇನ್ನು ಕಾಯಕ ಮನೆ ಎಂಬ ಹೆಸರಿನಲ್ಲಿ ವಿವಿಧ ಕಲೆಗಳ ಪ್ರಾತ್ಯಕ್ಷಿಕೆ ನಡೆಯುತ್ತಿದ್ದು, ಇದರಲ್ಲಿ ಮೇದಾರರ ಕಸುಬು ಪರಿಚಯಿಸುವ ಕೆಲಸ ಹಾಗೂ ಬಿದಿರಿನಿಂದ ಬುಟ್ಟಿ, ಏಣಿ ಇನ್ನಿತರ ವಸ್ತುಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ನಡೆಯಲಿದೆ. ಜೊತೆಗೆ ಶಿಲ್ಪಕಲೆ, ಕುಂಬಾರರ ಮಡಕೆ ತಯಾರಿಕೆ ಸೇರಿದಂತೆ ನಾನಾ ಕಲೆಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಜತೆಗೆ ವಚನಾಂತರಂಗ ಎಂಬ ಹೆಸರಿನಲ್ಲಿ ಬಸವಣ್ಣನವರ ಸಾಮಾಜಿಕ ತಳದಿಯ 25 ವಚನಗಳಿಗೆ ಸಂಬಂಧಿಸಿದ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಜಾನಪದ ಕಾರ್ಯಕ್ರಮಗಳ ವಿವರ
ಇಷ್ಟೇ ಅಲ್ಲದೆ, ಕಲೆ, ರಂಗಭೂಮಿಗೆ ಸಂಬಂಧಿಸಿದ ಚಾರಿತ್ರಿಕ ದಾಖಲೆಗಳ ಪ್ರದರ್ಶನ ಆಯೋಜನೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕಲೆ, ರಂಗಭೂಮಿ ಹಾಗೂ ಕಲಾವಿದರಿಗೆ ಸಂಬಂಧಿಸಿದ ಎಲ್ಲ ದಾಖಲೆ, ಮಹಾರಾಜರ ಕಾಲದಿಂದ ಇಲ್ಲಿವರೆಗೆನ ಎಲ್ಲ ದಾಖಲೆಗಳು ಪ್ರದರ್ಶನವಾಗಲಿವೆ. ಜನಪದ ಸಂಭ್ರಮಕ್ಕೆ ಮಾರ್ಚ್ 6ರಂದು ಚಾಲನೆ ಸಿಗಲಿದ್ದು, ಅಂದು ಜೋಗತಿ ನೃತ್ಯ, ಗೀಗೀ ಪದ ಕಾರ್ಯಕ್ರಮ ನಡೆಯಲಿದೆ.
ಮಾ.7ರಂದು ಧಂಗರಿ ಗಜ, ಗುಡುಂ ಬಾಜ, ಚಂಡೆ ವಾದನ, ಕಂಸಾಳೆ, ನಾದಸ್ವರ, ಗಾರುಡಿಗೊಂಬೆ ನೃತ್ಯ, ಮಾ.8ರಂದು ವೀರಗಾಸೆ, ಮಹಿಳಾ ಪೂಜಾ ಕುಣಿತ, ಮಾ.9ರಂದು ಡೊಳ್ಳು ಕುಣಿತ, ಪಟ ಕುಣಿತ, ಮಾ.10ರಂದು ಕೊರಗರ ಡೋಲು, ಗೊರವರ ಕುಣಿತ ಇರಲಿದೆ. ಒಟ್ಟಾರೆ ರಂಗಾಯಣದಲ್ಲಿ ಒಂದು ವಾರಗಳ ಕಾಲ ಸಡಗರ ಸಂಭ್ರಮ ಮನೆಮಾಡಲಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications