ಗಾಂಧಿ ಕರೆಗೆ ಪ್ರೇರಣೆಗೊಂಡ ಗ್ರಾಮ ಅಂತಿದ್ದರೆ ಅದು ಬದನಾಳು.. ಇಲ್ಲಿನ ವಿಶೇಷತೆ ಏನು ಗೊತ್ತಾ?
ಮೈಸೂರು, ಅಕ್ಟೋಬರ್, 2: ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಗಾಂದೀಜಿ ಅವರು ಹತ್ತಾರು ಕರೆಗಳನ್ನು ನೀಡಿದ್ದು, ಅದನ್ನು ಅವತ್ತಿನ ದೇಶವಾಸಿಗಳು ಶಿರಭಾಗಿ ಪಾಲಿಸಿದ್ದಾರೆ. ಅಲ್ಲದೆ ಅವರ ಕರೆಗೆ ಓಗೊಟ್ಟು ಖಾದಿ ಬಟ್ಟೆ ತಯಾರಿಸಿ, ಧರಿಸಿದ್ದಾರೆ. ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪಾದಿತ ವಸ್ತುಗಳತ್ತ ಮುಖ ಮಾಡಿದ್ದರು. ಇನ್ನು ಗಾಂಧಿ ಕರೆಯನ್ನು ಪಾಲಿಸಿ ಅದರಂತೆಯೇ ನಡೆದುಕೊಂಡಿದ್ದ ಗ್ರಾಮವಿದ್ದರೆ ಅದು ಮೈಸೂರಿನ ಬದನಾಳು ಮಾತ್ರ.
ಪ್ರತಿ ವರ್ಷ ಗಾಂಧಿ ಜಯಂತಿ ಬಂದಾಗಲೆಲ್ಲ ಬದನಾಳು ಗ್ರಾಮ ನೆನಪಿಗೆ ಬರುತ್ತದೆ. ಬೇರೆ ಕಡೆಗಳಲ್ಲಿ ವಿಶೇಷ ದಿನಗಳಂದು ಗಾಂಧಿಯನ್ನು ಜಪಿಸಿದರೆ, ಬದನಾಳಲ್ಲಿ ಮಾತ್ರ ವರ್ಷಪೂರ್ತಿ ಗಾಂಧಿಯನ್ನು ಸ್ಮರಿಸಲಾಗುತ್ತದೆ. ಇಷ್ಟಕ್ಕೂ ಇಲ್ಲಿ ಏಕೆ ಗಾಂಧಿಯನ್ನು ಸ್ಮರಿಸಲಾಗುತ್ತದೆ. ಇಲ್ಲಿ ಅಂತಹ ವಿಶೇಷತೆ ಏನಿದೆ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಉತ್ತರ ಸಿಗಬೇಕಾದರೆ ಬದನಾಳು ಬಗ್ಗೆ ಒಂದಷ್ಟು ಹೇಳಲೇಬೇಕಾಗುತ್ತದೆ.

ಬದನಾಳು ಗ್ರಾಮವು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿ (ಮೈಸೂರಿನಿಂದ 34 ಕಿಲೋ ಮೀಟರ್ ದೂರ)ಗೆ ಸೇರಿದ್ದು, ಚಾಮರಾಜನಗರಕ್ಕೆ ತೆರಳುವ ಮಾರ್ಗ ಮಧ್ಯೆ ಇದೆ. ಅಂದಾಜು 3,000ದಷ್ಟು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಗಾಂಧಿ ಹಾಕಿಕೊಟ್ಟ ಮಾರ್ಗದಲ್ಲಿ ಜನ ಸಾಗುತ್ತಿರುವುದು ಕಂಡು ಬರುತ್ತದೆ. ಇಲ್ಲಿಗೆ ಎರಡು ಬಾರಿ ಮಹಾತ್ಮಗಾಂಧಿ ಬಂದಿದ್ದರು ಎನ್ನುವುದೇ ವಿಶೇಷ. ಅವತ್ತಿನ ಕಾಲದಲ್ಲಿ ಪಟ್ಟಣದಿಂದ ದೂರ ಉಳಿದಿದ್ದ ಗ್ರಾಮಕ್ಕೆ ಗಾಂಧಿ ಎರಡು ಬಾರಿ ಭೇಟಿ ನೀಡಿದ್ದರು ಎನ್ನುವುದಾದರೆ, ಈ ಗ್ರಾಮದ ಮಹತ್ವ ಏನೆಂಬುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ.
ಗಾಂಧಿ ಕರೆಗೆ ಸ್ಪಂದಿಸಿದ್ದ ಬದನಾಳು: ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮಹಾತ್ಮ ಗಾಂಧಿ ಅವರು ಖಾದಿ ಬಳಕೆಗೆ ನೀಡಿದ್ದ ಕರೆ ಜನರನ್ನು ತಲುಪಿತ್ತು. ಅದರಲ್ಲೂ ಗಾಂಧಿ ಅನುಯಾಯಿ ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾಯರು ಗುಡಿಕೈಗಾರಿಕೆಯತ್ತ ಒಲವು ತೋರಿದ್ದರು. 1927ರಲ್ಲಿ ಸೈಮನ್ ಆಯೋಗದ ವಿರುದ್ಧ ಹೋರಾಟ ಮಾಡುತ್ತಾ ಹೋರಾಟದ ಭಾಗವಾಗಿ ಮೈಸೂರು ಸಂಸ್ಥಾನಕ್ಕೆ ಗಾಂಧಿ ಅವರು ಭೇಟಿ ನೀಡಿದ್ದರು.
ಈ ವೇಳೆ ಮೈಸೂರು ಮಹಾರಾಜರು ಬದನವಾಳು ಗ್ರಾಮದಲ್ಲಿ ಆರಂಭಿಸಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕರೆದೊಯ್ದು ತೋರಿಸಿದ್ದರು. ನಂತರ ಇಲ್ಲಿ ಗುಡಿಕೈಗಾರಿಕೆಗಳು ಇನ್ನಷ್ಟು ಅಭಿವೃದ್ಧಿ ಕಂಡವು.
ಈ ನಡುವೆ ಬದನಾಳು ಗ್ರಾಮದಲ್ಲಿ ಮೈಸೂರು ಮಹಾರಾಜರ ಸಹಕಾರದೊಂದಿಗೆ ಗ್ರಾಮೀಣ ಗುಡಿ ಕೈಗಾರಿಕೆಗಳಾದ ಬೆಂಕಿಕಡ್ಡಿ, ಕೈ ಕಾಗದ ಬಡಗಿ ಮತ್ತು ಕಮ್ಮಾರಿಕೆ, ಏಕದಳ ಹಾಗೂ ದ್ವಿದಳ ಧಾನ್ಯ ಪರಿಷ್ಕರಣೆ, ಅವಲಕ್ಕಿ, ಮುರ್ ಮುರಾ, ನಾರಿನ ಉತ್ಪನ್ನಗಳು ತಯಾರಿಕೆ ಗ್ರಾಮೀಣ ಎಣ್ಣೆ ಮತ್ತು ನಾರಿನ ಉದ್ದಿಮೆಗಳ ತರಬೇತಿ ಮತ್ತು ಉತ್ಪಾದನಾ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ಸುಮಾರು 500 ಜನರಿಗೆ ಉದ್ಯೋಗ ನೀಡಿದ್ದು ಗಾಂಧಿ ಅವರಿಗೆ ಖುಷಿ ತಂದಿತ್ತು.
ಬದನಾಳಿನಲ್ಲಿ ಚಿರವಾಗಿರುವ ಗಾಂಧಿ ನೆನಪು: ಅವತ್ತಿನ ಅಂದರೆ, 1927ರ ಗಾಂಧಿ ಭೇಟಿಯ ನೆನಪನ್ನು ಇಲ್ಲಿ ಜೀವಂತ ಉಳಿಸಲಾಗಿದ್ದು, ಬದನವಾಳು ನೂಲುವ ಪ್ರಾಂತ್ಯ ಎಂಬ ಕಲ್ಲನ್ನು ಶಿಲಾನ್ಯಾಸ ಮಾಡಿ 1927ನೇ ಇಸವಿ ಹಾಗೂ ಚರಕ ಚಿತ್ರವಿರುವ ಕಲ್ಲನ್ನು ಇಲ್ಲಿಡಲಾಗಿದೆ. ಅಲ್ಲದೆ, ಗಾಂಧಿಯವರ ಪುತ್ಥಳಿ ಹಾಗೂ ಮಂಟಪವೂ ಇಲ್ಲಿದೆ. 1927ರ ಬಳಿಕ 1934ರಲ್ಲಿ ಮೈಸೂರಿಗೆ ಆಗಮಿಸಿದಾಗ ಬದನಾಳಿಗೆ ಭೇಟಿ ನೀಡಿ ಖಾದಿ ಬಟ್ಟೆ ತಯಾರಿಕೆ ನಡೆಯುತ್ತಿದ್ದುದನ್ನು ವೀಕ್ಷಿಸಿದ್ದರಂತೆ. ಇವತ್ತಿಗೂ ಬದನಾಳಿನಲ್ಲಿ ಖಾದಿ ಗ್ರಾಮೋದ್ಯೋಗ ನಡೆಯುತ್ತಿದೆ.
ಈಗಿನ ಕಾಲಘಟ್ಟದಲ್ಲಿ ಖಾದಿ ಮುಂದೆ ಹಲವು ಸವಾಲುಗಳಿವೆ. ಇದರ ನಡುವೆ ಅಂದಿನ ಧ್ಯೇಯವನ್ನಿಟ್ಟುಕೊಂಡು ಗಾಂಧಿ ಮಾರ್ಗದಲ್ಲಿಯೇ ಸಾಗುತ್ತಿದೆ. ಜೀನ್ಸ್, ಪಾಲಿಸ್ಟಾರ್, ಸಿಲ್ಕ್ ಹೀಗೆ ವಿವಿಧ ಬಗೆಯ ಬಟ್ಟೆಗಳ ನಡುವೆಯೂ ತನ್ನದೇ ಗ್ರಾಹಕರನ್ನು ಸೆಳೆಯುತ್ತಾ ಮುನ್ನಡೆಯುತ್ತಿರುವುದು ಖುಷಿಪಡುವ ವಿಚಾರವಾಗಿದೆ. ಇವತ್ತಿಗೂ ಹಿರಿಯರು ಖಾದಿ ಬಟ್ಟೆಯನ್ನೇ ಇಷ್ಟಪಟ್ಟು ಧರಿಸುತ್ತಿದ್ದಾರೆ. ಜೊತೆಗೆ ಯುವ ಜನತೆ ಇತರೆ ಉಡುಪುಗಳೊಂದಿಗೆ ಖಾದಿಯೂ ಇರಲಿ ಎಂದು ಬಯಸುವುದರಿಂದ ಮತ್ತು ಅದು ದೇಹಕ್ಕೆ ಆರೋಗ್ಯಕಾರಿ ಎಂಬ ಸತ್ಯ ಗೊತ್ತಿರುವುದರಿಂದ ಇವತ್ತು ಖಾದಿ ಮಂಡಳಿ ಉಸಿರಾಡುವಂತಾಗಿದೆ.
ಗಾಂಧಿ ಮಾರ್ಗದಲ್ಲಿ ಖಾದಿ ಮಂಡಳಿ: ಮತ್ತೊಂದೆಡೆ ಬದಲಾದ ಕಾಲಮಾನದಲ್ಲಿ ಬಗೆ-ಬಗೆಯ ಬಟ್ಟೆಗಳು ಬಂದಿದ್ದರೂ ಖಾದಿ ಬಟ್ಟೆಯನ್ನು ಇಷ್ಟಪಟ್ಟು ಧರಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಶತಮಾನದತ್ತ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಮಂಡಳಿ ಮುನ್ನುಗ್ಗುತ್ತಿದೆ. ಹತ್ತು ಹಲವು ಕಾರಣಗಳಿಂದ ಖಾದಿ ಬಟ್ಟೆ ನೇಪಥ್ಯಕ್ಕೆ ಸರಿಯುತ್ತದೆ ಎಂದು ಹೇಳುತ್ತಾ ಬರಲಾಗುತ್ತಿದೆ. ಆದರೂ ಬದನವಾಳು ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ತರಬೇತಿ ಕೇಂದ್ರ ಗಾಂಧಿ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.












Click it and Unblock the Notifications