ಮೃಗಾಲಯದಲ್ಲಿ ಪ್ರಾಣಿಪಕ್ಷಿಗಳ ರಕ್ಷಣೆ ಹೇಗೆ ಮಾಡಲಾಗುತ್ತಿದೆ ಗೊತ್ತಾ?
ಮೈಸೂರು, ಮಾರ್ಚ್ 12: ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ಮೃಗಾಲಯದ ವ್ಯಾಪ್ತಿಗೆ ಬರುವ ಕಾರಂಜಿ ಸರೋವರ ಮತ್ತು ಕೂರ್ಗಳ್ಳಿಯ ರಕ್ಷಣಾ ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆಯಲ್ಲದೆ, ಮೃಗಾಲಯ ಮತ್ತು ಕೂರ್ಗಳ್ಳಿಯ ಪ್ರಾಣಿ ರಕ್ಷಣಾ ಕೇಂದ್ರಗಳಲ್ಲಿ ಬಿಸಿಲಿನ ಝಳದಿಂದ ಪ್ರಾಣಿ ಮತ್ತು ಪಕ್ಷಿಗಳು ತತ್ತರಿಸುತ್ತಿರುವುದರಿಂದ ನೀರಿನ ಜೆಟ್, ಕೂಲರ್, ಫ್ಯಾನ್ ಹೀಗೆ ಹಲವು ರೀತಿಯಲ್ಲಿ ತಂಪುವಾತಾವರಣವನ್ನು ಸೃಷ್ಟಿ ಮಾಡುವ ಕಾರ್ಯ ನಡೆದಿದ್ದು ಗಮನಸೆಳೆಯುತ್ತಿವೆ.
ಇದೀಗ ಮೃಗಾಲಯಕ್ಕೆ ಹೋಗುವವರಿಗೆ ಇವುಗಳೆಲ್ಲವೂ ಅಚ್ಚರಿಯನ್ನುಂಟು ಮಾಡುತ್ತಿವೆ. ಹೀಗಾಗಿ ದೂರದಿಂದ ಬರುವ ವೀಕ್ಷಕರು ಅಚ್ಚರಿಯ ನೋಟ ಬೀರುತ್ತಿದ್ದಾರೆ. ಹಾಗಾದರೆ ಮೃಗಾಲಯದಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ನೋಡುತ್ತಾ ಹೋದರೆ ಪ್ರಾಣಿಗಳ ರಕ್ಷಣೆಯಲ್ಲಿ ಮೃಗಾಲಯದ ಪಾತ್ರವೇನು ಎಂಬುದು ಗೊತ್ತಾಗುತ್ತದೆ. ಜತೆಗೆ ಪ್ರಾಣಿಗಳ ರಕ್ಷಣೆ ಮತ್ತು ಅವುಗಳ ಪಾಲನೆಯ ಬಗ್ಗೆಯೂ ಅರಿವಾಗುತ್ತದೆ. ಈ ಬಾರಿಯ ಬೇಸಿಗೆ ಮೃಗಾಲಯದ ಅಧಿಕಾರಿಗಳಿಗೆ ಸವಾಲ್ ಆಗಿದೆ ಎಂದರೆ ತಪ್ಪಾಗಲಾರದು.

ಒಂದೆಡೆ ರಣ ಬಿಸಿಲಾದರೆ ಮತ್ತೊಂದೆಡೆ ಹಕ್ಕಿಜ್ವರದ ಆತಂಕ ಇದೆರಡನ್ನು ಸವಾಲಾಗಿ ಪ್ರಾಣಿಗಳ ರಕ್ಷಣಾಕಾರ್ಯ ಕೈಗೊಳ್ಳುವುದು ಸುಲಭವಲ್ಲ ಆದರೆ ಆ ಕಾರ್ಯದಲ್ಲಿ ಮೃಗಾಲಯದ ಸಿಬ್ಬಂದಿ ನಿರತರಾಗಿರುವುದು ಕಂಡು ಬರುತ್ತಿದೆ. ಸದ್ಯ ಹೆಚ್ಚುತ್ತಿರುವ ತಾಪಮಾನ ಪ್ರಾಣಿಗಳ ಮೇಲೆ ಪರಿಣಾಮಗಳನ್ನು ಬೀರದಂತೆ ನೋಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಮೃಗಾಲಯದಲ್ಲಿ ತಂಪು ವಾತಾವರಣ ಸೃಷ್ಟಿ ಮಾಡಲಾಗಿದೆ. ಇದಕ್ಕಾಗಿ ಎಲಾ ಪ್ರಾಣಿಮನೆಗಳಲ್ಲಿ ನೀರಿನ ಜೆಟ್ಗಳು ಮತು ನೀರಿನ ಸಿಂಪರಣೆ ಮಾಡಲಾಗುತ್ತಿದೆ.
ಪ್ರಾಣಿಗಳ ಮನೆಯಲ್ಲಿ ಉಷ್ಣಮಾಪಕ ಅಳವಡಿಕೆ
ರಾತ್ರಿಯಲ್ಲಿ ಒಳಾವರಣಗಳಲ್ಲಿ ಪ್ರಾಣಿಗಳು ಆರಾಮದಾಯಕವಾಗಿರಲು ಫ್ಯಾನ್ಗಳು ಮತು ಕೂಲರ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಿಮಾಲಯದ ಕಪ್ಪು ಕರಡಿಗಳಿಗೆ ಉಷ್ಣಾಂಶವನ್ನು ನಿಯಂತ್ರಿಸಲು ಸಹಾಯವಾಗುವಂತೆ ಆಹಾರವನ್ನು ಐಸ್ಬ್ಲಾಕ್ ರೀತಿಯಲ್ಲಿ ಒದಗಿಸಲಾಗುತ್ತಿದೆ. ತಂಪಾದ ಆಹಾರ ಕ್ರಮವನ್ನು ಖಾತ್ರಿಪಡಿಸಲು ಎಲ್ಲಾ ಬಗೆಯ ವಾನರ ಜಾತಿಯ ಪ್ರಾಣಿಗಳಾದ ಗೊರಿಲ್ಲಾ, ಒರಾಂಗೂಟಾನ್, ಚಿಂಪಾಂಜಿ ಇತ್ಯಾದಿ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ತಾಜಾ ಎಳನೀರು ನೀರಿನಾಂಶವುಳ್ಳ ತರಕಾರಿ ಹಾಗೂ ಹಣ್ಣುಗಳಾದ ಕಲ್ಲಂಗಡಿ, ಸೌತೆಕಾಯಿ, ಕರಬೂಜ ಇತ್ಯಾದಿಗಳನ್ನು ಅವುಗಳ ಆಹಾರದಲ್ಲಿ ಹೆಚ್ಚಾಗಿ ಸೇರಿಸಿ ನೀಡಲಾಗುತ್ತಿದೆ ಹಾಗೂ ಓ.ಆರ್.ಎಸ್. ಅನ್ನು ಅವುಗಳ ಆಹಾರದಲ್ಲಿ ಬಳಸಲಾಗುತ್ತಿದೆ.
ಎಲ್ಲಾ ಬಗೆಯ ಸಸ್ಯಾಹಾರಿ ಪ್ರಾಣಿಮನೆಗಳಲ್ಲಿ ಕೆಸರಿನ ಕೊಳವನ್ನು ನಿರ್ಮಿಸುವ ಮೂಲಕ ಅವುಗಳಿಗೆ ನೈಸರ್ಗಿಕ ತಣ್ಣನೆಯ ವಾತಾವರಣವನ್ನು ಕಲ್ಪಿಸಲಾಗಿದೆ. ಪ್ರಾಣಿಗಳು ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಪ್ರಾಣಿಮನೆಗಳಲ್ಲಿ ಚಪ್ಪರಗಳನ್ನು ಒದಗಿಸಲಾಗಿದೆ. ಪ್ರತಿ ಪ್ರಾಣಿಮನೆಗಳಲ್ಲಿರುವ ಉಷ್ಣಾಂಶವನ್ನು ತಿಳಿದುಕೊಳ್ಳಲು ಉಷ್ಣಮಾಪಕಗಳನ್ನು ಅಳವಡಿಸಲಾಗಿದೆ. ಉಷ್ಣಮಾಪಕಗಳು ಏರುತ್ತಿರುವ ತಾಪಮಾನದಿಂದ ಮೃಗಾಲಯದೊಳಗಿರುವ ಎಲ್ಲಾ ಪ್ರಾಣಿಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಿ ರಕ್ಷಿಸಲು ಹಾಗೂ ಅವುಗಳನ್ನು ಕ್ಷೇಮವಾಗಿರಿಸಲು ಸಹಾಯವಾಗುತ್ತಿದೆ.

ಸೋಂಕು ತಗುಲದಂತೆ ಕಟ್ಟು ನಿಟ್ಟಿನ ಕ್ರಮ
ಇನ್ನು ಹಕ್ಕಿಜ್ವರದ ಭೀತಿ ಇರುವ ಹಿನ್ನಲೆಯಲ ಮೃಗಾಲಯದ ಆವರಣದ ವಾಹನ ಪ್ರವೇಶ ದ್ವಾರದಲ್ಲಿ(ಗೇಟ್-2) ಸೋಂಕುನಿವಾರಕ ದ್ರವ ಸಿಂಪಡಿಸಿದ್ದು, ಮೃಗಾಲಯಕ್ಕೆ ಪ್ರವೇಶಿಸುವ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು, ಆಹಾರ ಮತ್ತು ಇತರೆ ಸಾಮಗ್ರಿಗಳನ್ನು ಸಾಗಿಸುವ ಯಾವುದೇ ವಾಹನಗಳು ಸೋಂಕುನಿವಾರಕ ದ್ರವವುಳ್ಳ ಮಾರ್ಗದ ಮೂಲಕ ಹಾದುಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಮೃಗಾಲಯಕ್ಕೆ ಪ್ರವೇಶಿಸುವ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು, ಸಂದರ್ಶಕರು ಮತ್ತು ವೀಕ್ಷಕರು ಸೋಂಕುನಿವಾರಕ ದ್ರವವುಳ್ಳ ಮಾರ್ಗದ ಮೂಲಕ ಹಾದುಹೋಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಇದರ ಬಳಕೆ ಬಗ್ಗೆ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು, ಸಂದರ್ಶಕರು ಮತ್ತು ವೀಕ್ಷಕರುಗಳಿಗೆ ತರಬೇತಿ ನೀಡಲಾಗಿದೆ.
ಅಡ್ಡ ಸೋಂಕುಗಳನ್ನು ತಪ್ಪಿಸುವ ಸಲುವಾಗಿ ಪ್ರತಿ ಆವರಣದಲ್ಲೂ ಪಾದದ ಡಿಪ್ ಗಳನ್ನು ಸೋಂಕು ರಹಿತಗೊಳಿಸಲಾಗುತ್ತಿದೆ. ಪ್ರಾಣಿ-ಪಕ್ಷಿಗಳ ಮನೆಯಲ್ಲಿ ಕೆಲಸವನ್ನು ನಿರ್ವಹಿಸುವ (ತ್ಯಾಜ್ಯಗಳ ನಿರ್ವಹಣೆ ಮತ್ತು ಪ್ರಾಣಿಗಳಿಗೆ ಆಹಾರವನ್ನು ನೀಡುವ ಮುನ್ನ) ಮುನ್ನ ಮತ್ತು ತದನಂತರ ಹ್ಯಾಂಡ್ ಸ್ಯಾನಿಟೈಜರ್ಗಳನ್ನು ಬಳಸಲಾಗುತ್ತಿದೆ. ಎಲ್ಲಾ ಪ್ರಾಣಿ-ಪಾಲಕರಿಗೆ ಪ್ರಾಣಿ ಮನೆಗಳಲ್ಲಿ ಯಾವುದೇ ಅಸಹಜದ ವೈದ್ಯಕೀಯ ಚಿಹ್ನೆಗಳ ಬಗ್ಗೆ ತರಬೇತಿ ನೀಡಿದ್ದು, ಪಶುವೈದ್ಯರು ಅವುಗಳ ಕುರಿತು ಮೇಲ್ವಿಚಾರಣೆ ಮಾಡಿ ಸೂಕ್ತ ಕ್ರಮ ವಹಿಸುತ್ತಿದ್ದಾರೆ. ಕಾರಂಜಿ ಕೆರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವಲಸೆ ಹಕ್ಕಿಗಳ ಸಾವು ಕಂಡು ಬಂದರೆ ಪ್ರಾಧಿಕಾರಕ್ಕೆ ತಿಳಿಸಲು ಸೂಚನೆ ನೀಡಲಾಗಿದೆ.
ವರುಣ ಕರುಣಿಸಿದರೆ ವಾತಾವರಣ ತಂಪಾಗಲಿದೆ
ಮೈಸೂರು ಮೃಗಾಲಯ, ಕಾರಂಜಿ ಸರೋವರ ಮತ್ತು ಕೂರ್ಗಳ್ಳಿಯ ರಕ್ಷಣಾ ಕೇಂದ್ರಗಳ ಪಕ್ಷಿಗಳ ಮತ್ತು ಕಾರಂಜಿ ಸರೋವರದ ವಲಸೆ ಪಕ್ಷಿಗಳ ಹಿಕ್ಕೆಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಾದೇಶಿಕ ರೋಗ ನಿರ್ಣಯ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಮೃಗಾಲಯಕ್ಕೆ ತಂದ ಜೀವಂತ ಕೋಳಿಗಳನ್ನು ಪ್ರಾಣಿಗಳಿಗೆ ಆಹಾರವಾಗಿ ನೀಡುವ ಮುನ್ನ ವಿವಿಧ ರೋಗಗಳಿಗೆ ಸಂಬಂಧಿಸಿದ ಯಾವುದೇ ವೈದ್ಯಕೀಯ ಚಿಹ್ನೆಗಳ ಬಗ್ಗೆ ದೃಢಪಡಿಸಿದ ನಂತರ ಪಕ್ಷಿಗಳನ್ನು ವಧಿಸಿ, ಕೋಳಿ ಮಾಂಸವನ್ನು ಪೊಟ್ಯಾಸಿಯಮ್ ಪರ್ಮಾಂಗನೇಟ್ ದ್ರಾವಣದಿಂದ ಚೆನ್ನಾಗಿ ತೊಳೆಯಲಾಗುತ್ತದೆ ಮತ್ತು ನಂತರ ಯುವಿ ಸ್ಯಾನಿಟೈಜೇಸನ್ ಮಾಡಿ ಪ್ರಾಣಿಗಳಿಗೆ ಆಹಾರವನ್ನು ನೀಡಲಾಗುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರಿನಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆಯೇ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳನ್ನು ಬಿಸಿಲಿನಿಂದ ಕಾಪಾಡುವುದು ಸವಾಲ್ ಆಗಿ ಪರಿಣಮಿಸಿದ್ದು, ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮೃಗಾಲಯದ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿರುವುದು ಕಾಣಿಸುತ್ತಿದೆ. ಸದ್ಯ ಸ್ವಲ್ಪ ಮಟ್ಟಿಗೆ ಮೋಡ ಕಾಣಿಸಿಕೊಳ್ಳುತ್ತಿದ್ದು, ಜನ ಮಳೆ ಬೀಳುತ್ತಾ ಎಂದು ಆಸೆಗಣ್ಣಿನಿಂದ ಮುಗಿಲಿನತ್ತ ದೃಷ್ಟಿ ಬೀರುತ್ತಿದ್ದಾರೆ. ಮಳೆ ಆದಷ್ಟು ಬೇಗ ಸುರಿದು ವಾತಾವರಣ ತಂಪಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications