ಎರಡು ತಿಂಗಳ ಮಟ್ಟಿಗೆ ಆನೆ ದತ್ತು ತೆಗೆದುಕೊಂಡ ಒಂದು ವರ್ಷದ ಮಗು!
ಮೈಸೂರು, ಮೇ 01: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಲ್ಲಿ ಮಾನವೀಯತೆಯ ಮುಖಗಳು ಅನಾವರಣವಾಗುತ್ತಿವೆ. ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ನಿರ್ವಹಣೆಗೋಸ್ಕರ ನಾಗರಿಕರು ದೇಣಿಗೆ ನೀಡಿ ಸಹಕರಿಸುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ವಾಟ್ಸಪ್ ಮೂಲಕ ಮಾಡಿದ ಮನವಿಗೆ ಸ್ಪಂದಿಸಿದ ಅಮೆರಿಕದ ಫೀನಿಕ್ಸ್ ನಗರದ ನಿವಾಸಿ ಜ್ಯೋತಿ ವಿಕಾಸ್ ಎಂಬುವರು ತಮ್ಮ ಮಗಳ ಹೆಸರಿನಲ್ಲಿ ಆನೆಯೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಆನೆಯ ಎರಡು ತಿಂಗಳುಗಳ ನಿರ್ವಹಣೆಗೆ 25 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.
ಸಚಿವ ಎಸ್.ಟಿ. ಸೋಮಶೇಖರ್ ಅವರ ವಾಟ್ಸಪ್ ಸಂದೇಶದ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ ಅವರು, ಪ್ರಾಣಿ-ಪಕ್ಷಿಗಳ ನಿರ್ವಹಣೆಗೋಸ್ಕರ ತಮ್ಮ ಕೊಡುಗೆ ಇರಬೇಕು ಎಂದು ಅನ್ನಿಸಿ ತಕ್ಷಣ ತಮ್ಮ ಪುತ್ರಿ ಪ್ರಿಶಾ ಹೆಸರಿನಲ್ಲಿ 25 ಸಾವಿರ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಪ್ರಿಶಾ ನಮ್ಮ ಒಂದು ವರ್ಷದ ಮಗಳಾಗಿದ್ದು, ಆಕೆಯ ಹೆಸರಿನಲ್ಲಿ 2 ತಿಂಗಳ ಅವಧಿಗೆ ಆನೆಯೊಂದನ್ನು ದತ್ತು ತೆಗೆದುಕೊಂಡಿದ್ದೇವೆ. ಸಚಿವರು ಮಾಡಿದ ಮನವಿಯನ್ನು ಮಾಧ್ಯಮಗಳ ಮೂಲಕ ಗಮನಿಸಿ ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದೆವು. ಜೊತೆಗೆ ಇಲ್ಲಿನ ದಾನಿಗಳಿಂದ ಪ್ರಾಣಿಗಳಿಗೆ ಸಹಾಯಧನವನ್ನು ಸಂಗ್ರಹಿಸಲು ನಮ್ಮ ಬಳಗ ನಿರ್ಧರಿಸಿದೆ ಎಂದು ಅಮೆರಿಕದ ಫೀನಿಕ್ಸ್ ನಗರದ ಜ್ಯೋತಿ ವಿಕಾಸ್ ಹೇಳಿದ್ದಾರೆ.












Click it and Unblock the Notifications