ಮೈಸೂರು ಮೃಗಾಲಯಕ್ಕೆ ಕುಟುಂಬ ಸಮೇತ ಭೇಟಿ ಕೊಟ್ಟ ಶಿವರಾಜ್ ಕುಮಾರ್
ಮೈಸೂರು, ಅಕ್ಟೋಬರ್ 1: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಇಂದು ಕುಟುಂಬ ಸಮೇತರಾಗಿ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರೀಕರಣ ಬಿಡುವಿನ ಸಂದರ್ಭದಲ್ಲಿ ಮೃಗಾಲಯಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಳಿಯನ ಜೊತೆ ಮೃಗಾಲಯದಲ್ಲಿ ಅಡ್ಡಾಡಿ, ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಿದರು. ಅಲ್ಲದೇ ಅವುಗಳ ಚಲನವಲನ ಗಮನಿಸಿ ಮನರಂಜನೆ ಪಡೆದರು.
ತಾವೇ ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿಪಟ್ಟರು. ಇದೇ ವೇಳೆ ಶಿವರಾಜ್ ಕುಮಾರ್ ಮೃಗಾಲಯದ ನಿರ್ವಹಣೆ ಕಾರ್ಯದ ಬಗ್ಗೆ ಹಾಗೂ ಮೃಗಾಲಯದ ಬಗ್ಗೆ, ಪ್ರಾಣಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

"ಲಾಕ್ಡೌನ್ ಮುಗಿದ ಮೇಲೆ ನಾನು ಮೊದಲ ಬಾರಿಗೆ ಬೆಂಗಳೂರು ಬಿಟ್ಟು ಹೊರಗೆ ಬಂದಿದ್ದೇನೆ. 6 ತಿಂಗಳ ನಂತರ ಮೊದಲು ಬಂದಿದ್ದೆ ಮೈಸೂರಿಗೆ. ಇಲ್ಲಿನ ಮೃಗಾಲಯ ನೋಡಿ ಖುಷಿಯಾಗಿದೆ. ಪ್ರಾಣಿಗಳನ್ನು ನೋಡಿದ ತಕ್ಷಣ ಎಂ.ಪಿ.ಶಂಕರ್ ನೆನಪಾದರು. ಅಪ್ಪಾಜಿ ಜೊತೆಗಿನ ಸಿನಿಮಾ ನೆನಪಾಯ್ತು. ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದು ಖುಷಿಯಾಯಿತುʼ ಎಂದು ಸಂತೋಷ ಹಂಚಿಕೊಂಡರು ಅವರು.

ಮೃಗಾಲಯಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದ ವಿಚಾರ ತಿಳಿದು ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಿ ಅವರೂ ಖುಷಿಪಟ್ಟರು.












Click it and Unblock the Notifications