ಮೈಸೂರು ದಸರಾ ವೈಭವ ಸವಿಯಲು ಚಾಮುಂಡಿಬೆಟ್ಟದಲ್ಲಿ ಟೆಲಿಸ್ಕೋಪ್
ಮೈಸೂರು, ಜುಲೈ 13 : ನವರಾತ್ರಿಯ ವೈಭವ ಅಂದರೆ ಸಾಕು ಥಟ್ಟನೆ ನನೆಪಾಗುವುದು ನಾಡ ಅಧಿದೇವತೆ ಚಾಮುಂಡಿ. ಇಂತಹ ಚಾಮುಂಡಿದೇವಿಯ ಚಾಮುಂಡಿಬೆಟ್ಟದಿಂದ ದಸರೆ ವೈಭವ, ಪೂಜೆ, ಗಜ ಪಯಣ ಇದೆಲ್ಲವನ್ನು ವೀಕ್ಷಿಸಿದರೆ ಹೇಗಿರುತ್ತೆ ಹೇಳಿ. ಹೌದು. ಈ ಯೋಜನೆಯ ಕಾಯಕಲ್ಪಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.
ಏನಿದು ಯೋಜನೆ...?
ಹಲವಾರು ವರ್ಷಗಳ ಇತಿಹಾಸವಿರುವ ವೀಕ್ಷಣಾ ಗೋಪುರದ ಗೋಡೆ ಕಳೆದ ವರ್ಷ ಕುಸಿದಿತ್ತು. ಪಾರಂಪರಿಕ ಕಟ್ಟಡದ ಹಣೆಪಟ್ಟಿ ಹೊಂದಿರುವ ಈ ಗೋಪುರದ ಗೋಡೆಯನ್ನು ದುರಸ್ಥಿಗೊಳಿಸಲಾಗಿತ್ತು. ಇದೀಗ ಪಾರಂಪರಿಕತೆ ಕಾಪಾಡಿಕೊಂಡು ಹೊಸ ರೂಪದೊಂದಿಗೆ ಅಭಿವೃದ್ಧಿ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ. ನೆಲ ರಸ್ತೆಯಿಂದ ಸುಮಾರು 30 ಅಡಿ ಎತ್ತರದಲ್ಲಿರುವ ವೀಕ್ಷಣಾ ಗೋಪುರ ಈಗಾಗಲೇ ಪ್ರವಾಸಿ ತಾಣವೂ ಆಗಿದೆ. ಚಾಮುಂಡಿಬೆಟ್ಟಕ್ಕೆ ವಿವಿಧೆಡೆಗಳಿಂದ ಬರುವ ಪ್ರವಾಸಿಗರನ್ನು ಮಾರ್ಗ ಮಧ್ಯೆಯೇ ಇರುವ ಈ ಗೋಪುರ ಆಕರ್ಷಿಸುತ್ತಿದೆ.
ಮೈಸೂರು ನಾಡಹಬ್ಬಕ್ಕೆ ಗಜಪಡೆ ಸಿದ್ಧ: ಈ ಬಾರಿ ಹೆಣ್ಣಾನೆಯ ಕೊರತೆ!
ವೀಕ್ಷಣಾ ಗೋಪುರದ ಪ್ರಖ್ಯಾತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಲು ಹಲವು ಅಭಿವೃದ್ಧಿ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾಡಳಿತ ಹಾಗೂ ಚಾಮುಂಡಿಬೆಟ್ಟದ ದೇವಾಲಯದ ಆಡಳಿತ ಮಂಡಳಿ ವೀಕ್ಷಣಾ ಗೋಪುರವನ್ನು ಅಭಿವೃದ್ಧಿ ಪಡಿಸುವುದಕ್ಕೆ ಮುಂದಾಗಿದೆ. ಲೋಕೋಪಯೋಗಿ ಇಲಾಖೆಯೆ ಮೂಲಕ ಸುಮಾರು 45 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ.
ಬದಲಾವಣೆ ಹೇಗೆ...?
ಗೋಪುರದ ಮೇಲ್ಭಾಗದಲ್ಲಿ ಸುತ್ತೂಲೂ ಕಟ್ಟಲಾಗಿರುವ ತಡೆ ಗೋಡೆ ಕೇವಲ ಎರಡು ಅಡಿ ಎತ್ತರದ್ದಾಗಿದೆ. ಕೆಲವರು ತಡೆಗೋಡೆಯ ಮೇಲೆ ಕುಳಿತುಕೊಂಡಾಗ ಹಿಮ್ಮುಖವಾಗಿ ಮೇಲಿಂದ ಕೆಳಗೆ ಬಿದ್ದಿರುವ ನಿದರ್ಶನಗಳೂ ಇವೆ. ಇದನ್ನು ಮನಗಂಡಿರುವ ಜಿಲ್ಲಾಡಳಿತ ತಡೆಗೋಡೆಯನ್ನು ಎತ್ತರಗೊಳಿಸಿ ಪ್ರವಾಸಿಗರ ರಕ್ಷಣೆಗೆ ಕ್ರಮ ಕೈಗೊಂಡಿದೆ. ಗೋಪುರದ ಮುಂಭಾಗದಲ್ಲಿರುವ ಖಾಲಿ ಸ್ಥಳವನ್ನು 'ಯು' ಆಕಾರದಲ್ಲಿ ಸುಂದರ ಉದ್ಯಾನವನ ನಿರ್ಮಿಸಲಾಗುತ್ತದೆ. ಲಾನ್ ಬೆಳೆಸಿ, ವಿವಿಧ ಬಣ್ಣ ಬಣ್ಣದ ಹೂ ಗಿಡಗಳನ್ನು ನೆಡಲಾಗುತ್ತದೆ. ಅಲ್ಲದೆ ರಸ್ತೆಗೆ ಹೊಂದಿಕೊಂಡಂತೆ ಗೋಪುರದ ಸುತ್ತಲೂ ಬೇಲಿ ಹಾಕಿ ಗೇಟ್ ಅಳವಡಿಸಲಾಗುತ್ತದೆ.
ಈ ಬಾರಿಯ ಜಂಬೂಸವಾರಿಗೆ ಹೆಚ್ಚುವರಿಯಾಗಿ 4 ಆನೆಗಳು ಸೇರ್ಪಡೆ?
ಟೆಲಿಸ್ಕೋಪ್ ಅಳವಡಿಕೆ
ಊಟಿ ಸೇರಿದಂತೆ ವಿವಿಧೆಡೆ ಬೆಟ್ಟಗಳಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಟೆಲಿಸ್ಕೋಪ್ ಅಳವಡಿಸಿ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ವೀಕ್ಷಣಾ ಗೋಪುರಕ್ಕೂ ಟೆಲಿಸ್ಕೋಪ್ ಅಳವಡಿಸಲು ಉದ್ದೇಶಿಸಲಾಗಿದೆ. ಗೋಪುರದ ಅಭಿವೃದ್ಧಿ ಕಾರ್ಯ ಮುಗಿಯುತ್ತಿದ್ದಂತೆ ಟೆಲಿಸ್ಕೋಪ್ ಅಳವಡಿಸಲಾಗುತ್ತದೆ. ಆ ನಂತರ ಪ್ರವಾಸಿಗರು ಗೋಪುರಕ್ಕೆ ತೆರಳಿ ಟೆಲಿಸ್ಕೋಪ್ ಮೂಲಕ ಮೈಸೂರಿನ ಸೌಂಧರ್ಯವನ್ನು ವೀಕ್ಷಿಸಬಹುದಾಗಿದೆ. ಇದಕ್ಕೆ ಯಾವುದೆ ಶುಲ್ಕ ವಿಧಿಸದಿರಲು ಉದ್ದೇಶಿಸಲಾಗಿದೆ.
ದಸರೆಯ ವೇಳೆಗೆ ಕಾಮಗಾರಿ ಪೂರ್ಣ
ಪ್ರವಾಸಿಗರ ಹಿತ ಕಾಪಾಡುವುದಕ್ಕಾಗಿ ಗೋಪುರದ ಮೇಲಿರುವ ತಡೆ ಗೋಡೆಯನ್ನು ಎತ್ತರಕ್ಕೇರಿಸಲಾಗುತ್ತಿದೆ. ಸುತ್ತಲೂ ಫೆನ್ಸ್ ಹಾಕಲಾಗುತ್ತದೆ. ಮೆಟ್ಟಿಲುಗಳು ಹಾಳಾಗಿದ್ದರೆ ಅವುಗಳನ್ನು ದುರಸ್ಥಿ ಮಾಡಲಾಗುತ್ತದೆ. ಉದ್ಯಾನವನ ನಿರ್ಮಿಸಿ ಪ್ರವಾಸಿಗರಿಗೆ ಉತ್ತಮ ವಾತಾವರಣ ಸೃಷ್ಟಿಸಲಾಗುತ್ತದೆ. ಈ ಸಾಲಿನ ದಸರೆಯ ವೇಳೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಪ್ರವಾಸಿಗರು ಟೆಲಿಸ್ಕೋಪ್ ಹೊಂದಿರುವ ನವೀಕೃತ ವೀಕ್ಷಣಾ ಗೋಪುರವನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.